ರಾಜ್ಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ- ಐವನ್ ಡಿಸೋಜ
ಮಂಗಳೂರು, ಜು. 27: ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರ ಪಡೆಯಲಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವ ಯಾವೂದೇ ಭರವ ಸೆಗಳಿಲ್ಲ ಮತ್ತು ಬಹುಮತವಿಲ್ಲದ ಪಕ್ಷ ವನ್ನು ಸರಕಾರ ನಡೆಸಲು ಆಹ್ವಾನ ನೀಡಿರುವ ರಾಜ್ಯಪಾಲರ ಕ್ರಮ ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಲೋಕ ಸಭಾ ಚುನಾವಣೆಯ ಬಳಿಕ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟುಗಳನ್ನು ಪಡೆದಿದೆ. ಆದುದರಿಂದ ರಾಜ್ಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ವಿಧಾನ ಸಭೆಯಲ್ಲಿ ಬಹುಮತವಿಲ್ಲದ ಪಕ್ಷವನ್ನು ಸರಕಾರ ರಚಿಸಲು ಎರಡನೆ ಬಾರಿ ಆಹ್ವಾನಿಸಿರುವುದು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಡೆದಿದೆ. ಈ ರೀತಿಯ ಪ್ರಕರಣ ದೇಶದಲ್ಲೇ ಈ ಹಿಂದೆ ನಡೆದಿಲ್ಲ. ಈ ರೀತಿಯ ಕ್ರಮದಿಂದ ಸಂವಿಧಾನಕ್ಕೆ ಅಪಚಾರ ಎಸಗಿದಂತಾಗಿದೆ. ಇದಲ್ಲದೆ ಅಧಿಕಾರ ಸ್ವೀಕಾರದ ಪ್ರಮಾಣ ವಚನ ಸ್ವೀಕಾರದ ಮೊದಲೆ ಹಿಂದಿನ ಸರಕಾರ ಬಹುಮತದೊಂದಿಗೆ ತೆಗೆದುಕೊಂಡ ತೀರ್ಮಾನಗಳನ್ನು ತಡೆಹಿಡಿಯುವ ಆದೇಶ ಹೊರಡಿಸಿರುವುದು ದ್ವೇಷ ರಾಜಕಾರಣಕ್ಕೆ ಒಂದು ಉದಾಹರಣೆಯಾಗಿದೆ ಎಂದು ಐವನ್ ಟೀಕಿಸಿದರು.
ಲೂಟಿಕೋರರ ಸರಕಾರ:- ಈ ಹಿಂದೆ 2008ರಲ್ಲಿ ರಾಜ್ಯವನ್ನು ಲೂಟಿ ಗೈದವರು ಮತ್ತೆ ಸರಕಾರ ರಚನೆಯೊಂದಿಗೆ ಒಟ್ಟಾಗಿದ್ದಾರೆ. ಪಮ ಮುಖ್ಯಮಂತ್ರಿ ಸ್ಥಾನಕ್ಕೆ 5 ಜನ ಆಕಾಂಕ್ಷಿಗಳಾಗಿದ್ದಾರೆ. ಇದೊಂದು ಆರ್‌ಎಸ್‌ಎಸ್, ಬಿಜೆಪಿ ಅತೃಪ್ತರು ಸೇರಿಕೊಂಡಿರುವ ಸರಕಾರ. ಇವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಐವನ್ ತಿಳಿಸಿದ್ದಾರೆ.
ಡೆಂಗ್ ವಿರುದ್ಧ ಜಾಗೃತಿಗೆ ಕರೆ:- ಜಿಲ್ಲೆಯಲ್ಲಿ ಡೆಂಗ್ ಜ್ವರದಿಂದ ಜನರು ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ವೆನ್‌ಲಾಕ್‌ನಲ್ಲಿ ಡೆಂಗ್ ಚಿಕಿತ್ಸಾ ವಾರ್ಡ್ ಆರಂಭಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಈಗಾಗಲೆ ಸೂಚನೆ ನೀಡಲಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.







