ಮಧ್ಯಪ್ರದೇಶ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ, ಬಂಡವಾಳ ಹೂಡಿಕೆದಾರರಿಗೆ ಸ್ವಾಗತ: ಸೋನಿಯಾ ಮೀನಾ

ಬೆಂಗಳೂರು, ಜು. 27: ‘ಹೆಚ್ಚು ವಿಸ್ತಾರದ ಅರಣ್ಯ ಪ್ರದೇಶ, ವನ್ಯಜೀವಿಗಳು, ಅಪರೂಪದ ಪ್ರವಾಸಿ ತಾಣಗಳನ್ನು ಹೊಂದಿರುವ ಮಧ್ಯಪ್ರದೇಶ ರಾಜ್ಯಕ್ಕೆ ಪ್ರವಾಸಿಗರಿಗೆ ಸ್ವಾಗತ’ ಎಂದು ಮಧ್ಯಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕಿ ಸೋನಿಯಾ ಮೀನಾ ಕೋರಿದ್ದಾರೆ.
ಶನಿವಾರ ನಗರದಲ್ಲಿ ಏರ್ಪಡಿಸಿದ್ದ ರೋಡ್ ಶೋನಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ, ಬಂಡವಾಳ ಹೂಡಿಕೆದಾರರಿಗೆ ಸ್ವಾಗತಿಸುತ್ತಿದ್ದೇವೆ. ಮಧ್ಯಪ್ರದೇಶದ ಮತ್ತಷ್ಟು ಪ್ರವಾಸಿ ಸ್ನೇಹಿ ತಾಣವನ್ನಾಗಿಸಲು ಬಯಸುತ್ತೇವೆ ಎಂದರು. ಮಧ್ಯಪ್ರದೇಶ 77 ಸಾವಿರ ಚದರ ಕಿಮೀ ಅರಣ್ಯ ಪ್ರದೇಶವನ್ನು ಹೊಂದಿದ್ದು, 11 ರಾಷ್ಟ್ರೀಯ ಉದ್ಯಾನಗಳು ಮತ್ತು ಸತ್ಪುರಾ ವನ್ಯಜೀವಿ ಅಭಯಾರಣ್ಯ, ಚಂಬಲ್ ಗಡಿಯಾಲ್ ಅಭಯಾರಣ್ಯದಂತಹ 24 ವನ್ಯಜೀವಿ ಅಭಯಾರಣ್ಯ ಹೊಂದಿದೆ ಎಂದರು.
ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳಾದ ಖಜುರಾಹೊ, ಭಿಂಬೆಟ್ಕ ಮತ್ತು ಸಾಂಚಿಯಂತಹ ಐತಿಹಾಸಿಕ ತಾಣಗಳು ಮಧ್ಯಪ್ರದೇಶದಲ್ಲಿವೆ. ಅಲ್ಲದೆ, ಎರಡು ಜ್ಯೋತಿರ್ಲಿಂಗಗಳಾದ ಓಂಕಾರೇಶ್ವರ ಮತ್ತು ಮಹಾಕಾಳೇಶ್ವರದ ತವರಾಗಿದೆ. ಬಹ್ರಾನ್‌ಪುರ ಮತ್ತು ಭೂಪಾಲ್‌ನಲ್ಲಿ ಮೊಘಲ್ ಶೈಲಿಯ ವಾಸ್ತುಶಿಲ್ಪಗಳಿವೆ ಎಂದರು.
ಇಂದಿರಾಸಾಗರ್, ಗಾಂಧಿ ಸಾಗರ್, ತವಾ ಮತ್ತು ಬಾರ್ಗಿ ಆಕರ್ಷಕ ಜಲಪಾತಗಳಿದ್ದು, ಖಜುರಾಹೋ ನೃತ್ಯೋತ್ಸವ, ಮಾಲ್ವಾ ಉತ್ಸವ, ತಾನ್‌ಸೇನ್ ಉತ್ಸವ, ಅಲ್ಲಾವುದ್ದೀನ್ ಸಂಗೀತೋತ್ಸವ ಇತ್ಯಾದಿ ಅಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುತ್ತವೆ ಎಂದರು.







