ಭಟ್ಕಳ: ಉಚಿತ ಹೃದ್ರೋಗ ತಪಾಸಣಾ ಶಿಬಿರಕ್ಕೆ ಚಾಲನೆ

ಭಟ್ಕಳ: ಇಲ್ಲಿನ ವೆಲ್ಫೇರ್ ಆಸ್ಪತ್ರೆ ಹಾಗೂ ಕೇರಳದ ಖ್ಯಾತ ಮೈತ್ರಾ ಆಸ್ಪತ್ರೆಯ ಸಹಯೋಗದೊಂದಿಗೆ ಎರಡು ದಿನಗಳ ಕಾಲ ನಡೆಯುವ ಉಚಿತ ಹೃದ್ರೋಗ ತಪಾಸಣಾ ಶಿಬಿರಕ್ಕೆ ಶನಿವಾರ ವೆಲ್ಫೇರ್ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉದ್ಯಮಿ ಹಾಗೂ ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಯುನೂಸ್ ಕಾಝಿಯಾ ಮಾತನಾಡಿ, ಕೇರಳದ ಮೈತ್ರಾ ಆಸ್ಪತ್ರೆಯು ಸುಸಜ್ಜಿತ ಹಾಗೂ ಸಕಲ ಸೌಲಭ್ಯಗಳನ್ನು ಹೊಂದುವುದರ ಜತೆಗೆ ಗುಣಮಟ್ಟದಲ್ಲೂ ನಂಬರ್ ಒನ್ ಎನಿಸಿಕೊಂಡಿದೆ. ಭಟ್ಕಳದಲ್ಲಿ ಪ್ರಥಮ ಬಾರಿ ಹೃದ್ರೋಗ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿರುವುದು ಸಂತೋಷ ತಂದಿದೆ. ಆಸ್ಪತ್ರೆಯ ವ್ಯವಸ್ಥಾಪಕರೊಂದಿಗೆ ಮಾತನಾಡಿ ಭಟ್ಕಳದ ಜನರಿಗಾಗಿ ವಿಶೇಷ ರಿಯಾಯತಿ ಒದಗಿಸುವಂತೆ ಕೋರಿಕೊಳ್ಳುವುದಾಗಿ ತಿಳಿಸಿದರು.
ಗೌರವ ಅತಿಥಿಯಾಗಿದ್ದ ಭಟ್ಕಳ ಪೊಲೀಸ್ ವೃತ್ತದ ಸಿಪಿಐ ಗಣೇಶ ಮಾತನಾಡಿ, ಭಟ್ಕಳದಲ್ಲಿ ಹೃದ್ರೋಗ ತಪಾಸಣೆಗೆ ವ್ಯವಸ್ಥೆ ಮಾಡಿಕೊಟ್ಟ ವೆಲ್ಪೇರ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು. ಮೈತ್ರಾ ಆಸ್ಪತ್ರೆಯ ಕನ್ಸಲ್‍ಟೆಂಟ್ ಕಾರ್ಡಿಯೋಲೊಜಿಸ್ಟ್ ಡಾ. ಷಾಜುದ್ದೀನ್ ಹೃದ್ರೋಗ ಹಾಗೂ ಅದನ್ನು ತಡೆಗಟ್ಟು ಕ್ರಮದ ಕುರಿತಂತೆ ಬೆಳಕುಚೆಲ್ಲಿದರು. ಮೈತ್ರಾ ಆಸ್ಪತ್ರೆಯ ವ್ಯವಸ್ಥಾಪಕ ಮುರುಳಿ ಥರಾವತ್ ಮಾತನಾಡಿ, ಹೃದ್ರೋಗ ತಪಾಸಣಾ ಶಿಬಿರವನ್ನು ಅತ್ಯುತ್ತಮ ರೀತಿಯಲ್ಲಿ ಆಯೋಜಸಿದ ವೆಲ್ಫೇರ್ ಆಸ್ಪತ್ರೆಯ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ವೆಲ್ಪೇರ್ ಆಸ್ಪತ್ರೆಯ ನಿರ್ವಾಹಕ ಸೈಯ್ಯದ್ ಅಬುಲ್ ಆಲಾ ಬರ್ಮಾವರ್ ಮಾತನಾಡಿ, ಶಿಬಿರದಲ್ಲಿ ಭಾಗವಹಿಸಲು ಭಟ್ಕಳ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳ ಸುಮಾರು 200ಕ್ಕೂ ಹೆಚ್ಚು ಮಂದಿ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಈಗ ಹೆಸರನ್ನು ನೊಂದಾಯಿಸುವ ಪ್ರಕಿಯೆಯನ್ನು ಸ್ಥಗಿತಗೊಳಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೆಲ್ಫೇರ್ ಆಸ್ಪತ್ರೆಯ ಉಪಾಧ್ಯಕ್ಷ ಎಸ್.ಕೆ.ಸೈಯ್ಯದ್ ಸಲಾಹುದ್ದೀನ್ ಮಾತನಾಡಿ, ಭಟ್ಕಳದ ಜನರ ಪ್ರಯೋಜನಕ್ಕಾಗಿ ಮತ್ತು ರೋಗಿಗಳ ಸೌಲಭ್ಯಕ್ಕಾಗಿ ಈ ಆಸ್ಪತ್ರೆಯನ್ನು ಸ್ಥಾಪಿಸಿದ್ದು, ಇದರ ಉದ್ದೇಶ ಹಣಗಳಿಕೆಯಾಗಿರದೆ ಸೇವಾ ಮನೋಭಾವನೆಯನ್ನು ಹೊಂದಿದೆ ಎಂದರು. ಡಾ.ಝಹಿರ್ ಕೋಲಾ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.
ಹಾಫಿಝ್ ಝುಹೇಬ್ ದಾಮೂದಿಯವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಬಶ್ಶಿರ್ ಹುಸೇನ್ ಹಲ್ಲಾರೆ ಪ್ರಸ್ತಾವಿಕವಾಗಿ ಮಾತನಾಡಿದರು. ಭಟ್ಕಳ ಮುಸ್ಲಿಮ್ ಜಮಾಅತ್ ದುಬೈ ಇದರ ಮಾಜಿ ಪ್ರಧಾನ ಕಾರ್ಯದರ್ಶಿ ಜೈಲಾನಿ ಮೊಹತೆಶಮ್, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಸೀಫ್ ಖಲಿಫಾ, ಸಮಾಜ ಸೇವಕ ಮುಹಮ್ಮದ್ ಯುನೂಸ್ ರುಕ್ನುದ್ದೀನ್, ಮುಹಮ್ಮದ್ ಯಾಹ್ಯಾ ಹಲ್ಲಾರೆ, ಮೌಲ್ವಿ ಸಫ್ವಾನ್ ಮೋಟಿಯಾ ನದ್ವಿ ಮತ್ತಿರರು ಉಪಸ್ಥಿತರಿದ್ದರು.
ದೇಶದ ಖ್ಯಾತ ಹೃದ್ರೋಗ ತಜ್ಞ ಹಾಗೂ ಮೈತ್ರಾ ಆಸ್ಪತ್ರೆಯ ಡೈರೆಟ್ಕರ್ ಮತ್ತು ಕ್ಲಿನಿಕಲ್ ಮುಖ್ಯಸ್ಥ ಡಾ.ಅಲಿ ಫೈಝಲ್ ಜು.28 ರಂದು ಉಪಸ್ಥಿತರಿದ್ದು ರೋಗಿಗಳ ತಪಾಸಣೆ ಹಾಗೂ ಸೂಕ್ತ ಸಲಹೆಗಳನ್ನು ನೀಡಲಿದ್ದಾರೆ.











