ಸಿಲಿಕಾನ್ ಸಿಟಿಯನ್ನು ಸ್ವಚ್ಛ ನಗರವನ್ನಾಗಿ ಮಾಡಲು ಬಿಬಿಎಂಪಿ ಪಣ: ಮೇಯರ್ ಗಂಗಾಂಬಿಕೆ

ಬೆಂಗಳೂರು, ಜು.27: ಸಿಲಿಕಾನ್ ಸಿಟಿಯನ್ನು ಸ್ವಚ್ಛ ನಗರವನ್ನಾಗಿ ಮಾಡಲು ಬಿಬಿಎಂಪಿ ಪಣತೊಟ್ಟಿದ್ದು, ಪಾಲಿಕೆಯ ಜತೆ ಎಲ್ಲಾ ಶಾಲಾ ಮಕ್ಕಳು ಕೈಜೋಡಿಸಿ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.
ಶನಿವಾರ ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ ಮುಂಭಾಗದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಕಸದ ಸಮಸ್ಯೆ ನಿವಾರಣೆ ಹಾಗೂ ಪ್ಲಾಸ್ಟಿಕ್ ಮುಕ್ತ ಬೆಂಗಳೂರು ಮಾಡಲು ಪಾಲಿಕೆ ಮುಂದಾಗಿದೆ. ಈ ಸಂಬಂಧ ಪಾಲಿಕೆ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ನೀವು ನಾಗರಿಕರಲ್ಲಿ ಅರಿವು ಮೂಡಿಸಿದಾಗ ಅದನ್ನು ಅನುಸರಿಸಲು ಮುಂದಾಗುತ್ತಾರೆ ಎಂದು ಹೇಳಿದರು.
ಈ ಮೇಲಿನ ಅಂಶಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಈಗಾಗಲೇ ದಕ್ಷಿಣ ವಲಯದಲ್ಲಿ ಜಾಥಾ ಕಾರ್ಯಕ್ರಮ ನಡೆಸಲಾಗಿದೆ. ಪಶ್ಚಿಮ ವಲಯದಲ್ಲಿ ಇಂದು ಆಯೋಜಿಸಲಾಗುತ್ತಿದ್ದು, ವಲಯದ 44 ವಾರ್ಡ್‌ಗಳಲ್ಲಿಯೂ ಜಾಥಾ ಕಾರ್ಯಕ್ರಮ ನಡೆಯುತ್ತಿದೆ. ಇದೇ ರೀತಿ ಉಳಿದ ಆರು ವಲಯಗಳಲ್ಲೂ ಮಕ್ಕಳ ಸಹಯೋಗದೊಂದಿಗೆ ಜಾಥಾ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಜಾಥಾ ಕಾರ್ಯಕ್ರಮದಲ್ಲಿ ಹತ್ತು ಶಾಲೆಗಳಿಂದ 500ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು, ನೀರು ಪೋಲು ಮಾಡಬಾರದು, ಡೆಂಗ್ ಪ್ರಕರಣ ತಡೆಯುವ, ಕಸ ವಿಂಗಡಣೆ ಮಾಡುವ ವಿಧಾನ, ಪ್ಲಾಸ್ಟಿಕ್ ಬಳಕೆಯಿಂದಾಗುವ ಸಮಸ್ಯೆಗಳ ಬಗೆಗಿನ ಜಾಗೃತಿ ಮೂಡಿಸುವ ನಾಮಫಲಕಗಳನ್ನು ಹಿಡಿದು ಮಲ್ಲೇಶ್ವರಂನ ಪ್ರಮುಖ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರು, ಆಯುಕ್ತರು(ಘನತ್ಯಾಜ್ಯ ಮತ್ತು ಆಡಳಿತ), ಪಶ್ಚಿಮ ವಲಯ ಜಂಟಿ ಆಯುಕ್ತರು, ಪಾಲಿಕೆ ಶಿಕ್ಷಣ ಅಧಿಕಾರಿಗಳು, ಶಾಲಾ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ಪಿಒಪಿ ಗಣೇಶ ಮೂರ್ತಿಗಳನ್ನು ಬಳಸುವುದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ ಎಂಬ ಅರಿವಿದ್ದರೂ ನಾಗರಿಕರು ಪಿಒಪಿ ಗಣೇಶ ಮೂರ್ತಿಗಳನ್ನೇ ಕೂರಿಸುತ್ತಾರೆ. ಮಕ್ಕಳು ಮಣ್ಣಿನ ಗಣೇಶ ಮೂರ್ತಿಗಳನ್ನು ಕೂರಿಸುವಂತೆ ಮನೆಗಳಲ್ಲಿ, ಸುತ್ತಮುತ್ತಲಿನ ಜನಕ್ಕೆ ಮನವರಿಕೆ ಮಾಡಬೇಕು. ಅದಲ್ಲದೆ ನೀರು ಮಿತಬಳಕೆ ಹಾಗೂ ಡೆಂಗ್ ಪ್ರಕರಣ ತಡೆಯುವ ಬಗ್ಗೆಯೂ ನಾಗರಿಕರಲ್ಲಿ ಅರಿವು ಮೂಡಿಸಬೇಕು.
-ಗಂಗಾಂಬಿಕೆ, ಬಿಬಿಎಂಪಿ ಮೇಯರ್







