'ಡೆಂಗ್, ಮಲೇರಿಯಾ ಬಗ್ಗೆ ಬೇಡ ಭಯ- ಇರಲಿ ಎಚ್ಚರ'
ಸಾಂಕ್ರಾಮಿಕ ರೋಗ ನಿಯಂತ್ರಣ ನಮ್ಮ ಕೈಯ್ಯಲ್ಲೇ.
ಮಂಗಳೂರು : ಹಲವಾರು ವರ್ಷಗಳಿಂದ ದ.ಕ. ಜಿಲ್ಲೆಯಲ್ಲಿ ಮುಖ್ಯವಾಗಿ ಮಂಗಳೂರು ನಗರದಲ್ಲಿ ಮಲೇರಿಯಾ ರೋಗ ತೀವ್ರ ರೀತಿಯಲ್ಲಿ ಬಾಧಿಸುತ್ತಿದ್ದರೆ, ಈ ಬಾರಿ ಡೆಂಗೆ ಜ್ವರ ತೀವ್ರವಾಗಿ ಜನಸಾಮಾನ್ಯರನ್ನು ಕಂಗೆಡಿಸಿದೆ.ಎಲ್ಲಿ ಕೇಳಿದರೂ ಡೆಂಗ್ ಜ್ವರದ ಭೀತಿ, ಗಾಬರಿ ಸಾಮಾನ್ಯವಾಗಿದೆ. ಸಣ್ಣ ಮಟ್ಟಿನ ವೈರಲ್ ಜ್ವರ ಬಂದಾಗಲೂ ಆತಂಕಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಆದರೆ ಡೆಂಗ್ ವೈರಸ್‌ನಿಂದ ಹರಡುವ ಸಾಂಕ್ರಾಮಿಕ ರೋಗ. ಈಡಿಸ್ ಇಜಿಪ್ಟೈಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಈ ರೋಗ ಹರಡುತ್ತದೆ. ಹಾಗಾಗಿ ಈ ಸೊಳ್ಳೆಗಳು ಉತ್ಪತ್ತಿಯಾಗದಂತೆ ಹಾಗೂ ಕಚ್ಚದಂತೆ ಎಚ್ಚರಿಕೆ ವಹಿಸುವುದೇ ಈ ರೋಗ ನಿಯಂತ್ರಣದ ಮುಂಜಾಗೃತಾ ಕ್ರಮ.
ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ದಿ ಈ ಸೊಳ್ಳೆಯದ್ದು!
ಡೆಂಗ್ ಜ್ವರವನ್ನು ಹರಡುವ ಸೊಳ್ಳೆ ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ದಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿಯೇ ಮನುಷ್ಯರನ್ನು ಕಚ್ಚುತ್ತದೆ. ಹಾಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನಾವೇ ಖುದ್ದು ಎಚ್ಚರಿಕೆ ವಹಿಸುವ ಮೂಲಕ ಈ ಡೆಂಗ್ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳಿಂದಲೂ ಮುಕ್ತಿ ಪಡೆಯಲು ಸಾಧ್ಯ ಎನ್ನುವುದು ತಜ್ಞರ ಅಭಿಪ್ರಾಯ.
ನಾವೇನು ಮಾಡಬೇಕು ?
ತೆರೆದ ಪ್ರದೇಶದಲ್ಲಿ ಎಲ್ಲಿಯಾದರೂ ನೀರು ನಿಂತಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ಉತ್ಪತ್ತಿಯ ತಾಣ. ನಮ್ಮ ಮನೆಯಲ್ಲಿ ಉಪಯೋಗಿಸುವ ನೀರಿನ ಟ್ಯಾಂಕ್ ಸೇರಿದಂತೆ ಡ್ರಂ, ಬ್ಯಾರಲ್‌ಗಳು ಹಾಗೂ ಟ್ಯಾಂಕ್‌ಗಳನ್ನು ಯಾವುದೇ ಕಾರಣಕ್ಕೂ ತೆರೆಡಿಡಬಾರದು. ಭದ್ರವಾಗಿ ಮುಚ್ಚುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ನೀಡಬಾರದು. ಮನೆಯ ಮಹಡಿ ಸೇರಿದಂತೆ ಯಾವುದೇ ಪ್ರದೇಶದಲ್ಲಿ, ಸುತ್ತಮುತ್ತ ಮಳೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.
ಸಣ್ಣ ಪುಟ್ಟ ಸ್ಥಳಗಳಲ್ಲೂ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ವಸ್ತುಗಳು, ಟೈರ್‌ಗಳು, ಒಡೆದ ತೆಂಗಿನ ಚಿಪ್ಪುಗಳಲ್ಲಿಯೂ ನೀರು ಸಂಗ್ರಹವಾಗದಂತೆ ಗಮನ ಹರಿಸುವ ಜವಾಬ್ಧಾರಿಯನ್ನು ನಾವೇ ವಹಿಸಿಕೊಂಡಾಗ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಬಹುಮಟ್ಟಿಗೆ ಸಾಧ್ಯ ಎನ್ನುತ್ತಾರೆ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್.
ಸೊಳ್ಳೆಗಳಿಂದ ರಕ್ಷಣೆ ಹೇಗೆ ?
ಸೊಳ್ಳೆಗಳು ನಮ್ಮ ದೇಹದ ಬೆವರಿನ ವಾಸನೆಯನ್ನು ಆಕರ್ಷಿಸದಂತೆ ಎಚ್ಚರಿಕೆ ವಹಿಸುವ ಮೂಲಕ ಸೊಳ್ಳೆಗಳ ಕಡಿತದಿಂದ ರಕ್ಷಿಸಿಕೊಳ್ಳ ಬಹುದು. ಇದಕ್ಕಾಗಿ ದೇಹಕ್ಕೆ ಸಾಮಾನ್ಯವಾಗಿ ತೆಂಗಿನ ಎಣ್ಣೆ ಸೇರಿದಂತೆ, ಬೇವಿನ ಎಣ್ಣೆ, ಸಿಟ್ರೊನೆಲ್ಲಾ ಎಣ್ಣೆಯನ್ನು ದೇಹಕ್ಕೆ ಸವರಿಕೊಳ್ಳಬಹುದು. ತುಂಬು ತೋಳಿನಿಂದ ಕೂಡಿದ, ಮೈ ಮುಚ್ಚುವ ವಸ್ತ್ರಗಳನ್ನು ಹಾಕಿಕೊಳ್ಳುವುದು, ಮಲಗುವ ಸಂದರ್ಭ ಸೊಳ್ಳೆ ನಿರೋಧಕ ಅಥವಾ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು ಕೂಡಾ ಸೂಕ್ತ.
ಡೆಂಗ್ ರೋಗ ಲಕ್ಷಣಗಳು
ಇದ್ದಕ್ಕಿದ್ದಂತೆ ತೀವ್ರ ಜ್ವರ, ಮೈ-ಕೈ ನೋವು ಮತ್ತು ಕೀಲು ನೋವು, ತೀವ್ರ ತೆರನಾದ ತಲೆನೋವು, ಹೆಚ್ಚಾಗಿ ಹಣೆ ಮುಂಭಾಗ ಹಾಗೂ ಕಣ್ಣಿನ ಹಿಂಭಾಗದ ನೋವು, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ ಗುರುತುಗಳು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ, ವಾಕರಿಕೆ ಮತ್ತು ವಾಂತಿ.







