ಅಂಕೋಲಾ: ನಿವೃತ್ತ ಸೈನಿಕನಿಂದ ಗುಂಡಿನ ದಾಳಿ; ಬಾಲಕ ಮೃತ್ಯು
ಅಂಕೋಲಾ: ನಿವೃತ್ತ ಸೈನಿಕನೊಬ್ಬ ತನ್ನ ತಮ್ಮನ ಪತ್ನಿ ಮತ್ತು ಪುತ್ರನ ಮೇಲೆ ಶನಿವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 9 ವರ್ಷದ ಬಾಲಕ ಮೃತಪಟ್ಟಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ಅಂಕೋಲಾದ ಮಠಾಕೇರಿ ಬಡಾವಣೆಯ ನಿವಾಸಿ ಅನುಜ್ (9) ಮೃತ ಬಾಲಕ. ಮೇದಾ (40) ಗಂಭೀರವಾಗಿ ಗಾಯಗೊಂಡಿದ್ದಾರೆ. ಅಜಯ್ ಪ್ರಭು (44) ಕೃತ್ಯ ಎಸಗಿದ ನಿವೃತ್ತ ಯೋಧ ಎಂದು ತಿಳಿದುಬಂದಿದೆ. ಈತನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಶಸ್ತ್ರವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೃತ್ಯಕ್ಕೆ ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.