ಹಿರಿಯ ತುಳು ಸಾಹಿತಿ ಸೀತಾರಾಮ್ ಕುಲಾಲ್ ನಿಧನ

ಮಂಗಳೂರು, ಜು.28: ಹಿರಿಯ ತುಳು ಸಾಹಿತಿ, ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಕೆ. ಸೀತಾರಾಮ ಕುಲಾಲ್ ರವಿವಾರ ನಿಧನರಾದರು.
ಸೀತಾರಾಮ ಕುಲಾಲ್ ಸುಮಾರು 11ಕ್ಕೂ ಹೆಚ್ಚು ತುಳುಚಿತ್ರಗಳಿಗೆ ಹಾಗೂ 25ಕ್ಕೂ ಮಿಕ್ಕಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಮಂಗಳೂರಿನ ಬಿಜೈಯಲ್ಲಿ ನೆಲೆಯೂರಿದ್ದ ಸೀತಾರಾಮ್ ಕುಲಾಲ್ ಮೊದಲು ‘ದಾಸಿಪುತ್ರ’ ಎನ್ನುವ ಕನ್ನಡ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದ್ದರು.
ಕಲಾವಿದರಾಗಿ ಕಳೆದ 45 ವರ್ಷಗಳಿಂದ ಕಲಾಸೇವೆ ಮಾಡಿದ ಇವರು ತಾವು ರಚಿಸಿರುವ ಯಾವುದೇ ಕೃತಿಗಾಗಲಿ, ನಟನೆ, ನಾಟಕ ಹಾಗೂ ಹಾಡುಗಳಿಗಾಗಲಿ ಯಾವುದೇ ರೀತಿಯ ಸಂಭಾವನೆ ಪಡೆದುಕೊಳ್ಳುತ್ತಿರಲಿಲ್ಲ.
ಅವರಿಗೆ ‘ರಂಗಕಲಾಭೂಷಣ’, ‘ತುಳುರತ್ನ’, ‘ಪೆರ್ಮೆದ ತುಳುವೆ’, ‘ತುಳುಸಿರಿ’, ‘ತುಳು ಸಾಹಿತ್ಯ ರತ್ನಾಕರ’, ‘ತೌಳವ ಪ್ರಶಸ್ತಿ’ ಇತ್ಯಾದಿ ಹಲವು ಪ್ರಶಸ್ತಿ ಬಂದಿವೆ. ಅಲ್ಲದೆ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 2014ರ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.
Next Story





