ಪ್ರೆಸಿಡೆಂಟ್ಸ್ ಕಪ್: ಮೇರಿ ಕೋಮ್‌ಗೆ ಚಿನ್ನದ ಪದಕ

ಹೊಸದಿಲ್ಲಿ: ಆರು ಬಾರಿಯ ವಿಶ್ವಚಾಂಪಿಯನ್ ಎಂಸಿ ಮೇರಿಕೋಮ್ ಅವರು 23ನೇ ಪ್ರೆಸಿಡೆಂಟ್ಸ್ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ರವಿವಾರ ನಡೆದ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಅವರು ಇಂಡೋನೇಷ್ಯಾದ ಲಬೂವನ್ ಬಜೊ ಅವರನ್ನು ಸುಲಭವಾಗಿ ಮಣಿಸಿದರು.
36 ವರ್ಷ ವಯಸ್ಸಿನ ಮೇರಿಕೋಮ್ ಕಳೆದ ಮೇ ತಿಂಗಳಲ್ಲಿ ನಡೆದ ಇಂಡಿಯಾ ಓಪನ್ ಬಾಕ್ಸಿಂಗ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದರು. ಆದರೆ ಏಷ್ಯನ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದರು. ಏಷ್ಯನ್ ಚಾಂಪಿಯನ್‌ಶಿಪ್ ಮೇ ತಿಂಗಳಲ್ಲಿ ಥಾಯ್ಲೆಂಡ್‌ನಲ್ಲಿ ನಡೆದಿತ್ತು.
ಇಂಡಿಯಾ ಓಪನ್‌ನಲ್ಲಿ ಎರಡು ತಿಂಗಳ ಹಿಂದೆ ಚಿನ್ನ ಗೆದ್ದ ಮೇರಿ ಕೋಮ್, ವಿಶ್ವಚಾಂಪಿಯನ್‌ಶಿಪ್ ಹಿನ್ನೆಲೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳುವ ಸಲುವಾಗಿ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಿದ್ದರು.
ಕಳೆದ ವರ್ಷ ಹೊಸದಿಲ್ಲಿಯಲ್ಲಿ ಆರನೇ ವಿಶ್ವ ಪ್ರಶಸ್ತಿ ಗೆದ್ದಿದ್ದ ಕೋಮ್, ರಷ್ಯಾದ ಯೆಕಟಿನ್ ಬರ್ಗ್‌ನಲ್ಲಿ ನಡೆಯುವ ವಿಶ್ವಚಾಂಪಿಯನ್ ಶಿಪ್‌ನಲ್ಲಿ 2020ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದಾರೆ. 2019ನೇ ಸಾಲಿನ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸೆಪ್ಟೆಂಬರ್ 7 ರಿಂದ 21ರವರೆಗೆ ನಡೆಯಲಿದೆ.







