ಮೇಲುಕೀಳು ತೊಲಗಿ, ಸಮಾನತೆ ಮನೋಧರ್ಮ ಪಸರಿಸಲಿ: ಜಿ.ರಾಜಶೇಖರ್
‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ, ಜು.28: ಇಂದಿನ ಸಂದರ್ಭದಲ್ಲಿ ಬಸವಣ್ಣರ ವಚನಗಳು ಬಹಳ ಪ್ರಸ್ತುತ. ಅರಣ್ಯದಲ್ಲಿ ಬೇಟೆಯಾಡಿದ ಮೊಲಗಿಂತಲೂ ಮನುಷ್ಯನ ಬಾಳು ಇನ್ನೂ ಕಷ್ಟ. ಯಾಕೆಂದರೆ ಮನುಷ್ಯನ ಬದುಕಿಗೆ ಬೆಲೆಯೇ ಇಲ್ಲ ಎಂಬುದಾಗಿ ಬಸವಣ್ಣ ವಚನದಲ್ಲಿ ಹೇಳುತ್ತಾರೆ. ಹಾಗಾಗಿ ಮೇಲುಕೀಳು ಎಂಬ ಭಾವನೆಗೆ ಆಧಾರವೇ ಇಲ್ಲ. ಈ ಸಮಾನತೆ ಮನೋಧರ್ಮವನ್ನು ಎಲ್ಲ ಕಡೆ ಪಸರಿಸಬೇಕು ಹಿರಿಯ ಚಿಂತಕ ಜಿ.ರಾಜಶೇಖರ್ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಸಹಮತ ವೇದಿಕೆ ಮತ್ತು ಉಡುಪಿ ಬಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆ.2ರಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿರುವ ಮತ್ತೆ ಕಲ್ಯಾಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ರವಿವಾರ ಉಡುಪಿ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಸಾಣೆಹಳ್ಳಿ ಸ್ವಾಮೀಜಿ ಇಂದು ಕಾಲದ ಪ್ರವಾಹದ ವಿರುದ್ಧ ಈಜಲು ಹೊರಟಿದ್ದಾರೆ. ಅವರಿಗೆ ನಾವೆಲ್ಲ ಬೆಂಬಲ ನೀಡಬೇಕಾಗಿದೆ. 12ನೆ ಶತಮಾನ ದಲ್ಲಿ ಬಸವಣ್ಣ ಕೂಡ ಕಾಲದ ಪ್ರವಾಹ, ಪ್ರವೃತಿ ಹಾಗೂ ಬಹುಜನರ ಸಂಕಲ್ಪದ ವಿರುದ್ಧ ಈಜಿ ಅಸಮಾನತೆಯ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿ ದರು. ಬಸವಣ್ಣರ ಈ ಸಂದೇಶಗಳನ್ನು ಜನರಿಗೆ ಮುಟ್ಟಿಸಲು ಸಾಣೆಹಳ್ಳಿ ಸ್ವಾಮೀಜಿ ಸಂಕಲ್ಪಿಸಿದ್ದಾರೆ ಎಂದರು.
ದಸಂಸ ಹಿರಿಯ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, 18ನೆ ಶತಮಾನದಲ್ಲಿನ ಅಸ್ಪಶ್ಯತೆ, ಜಾತಿಯತೆ, ಅಸಮಾನತೆಯ ಕಾಲದಲ್ಲಿ ಬಸವಣ್ಣ ಪ್ರತಿಪಾದಿಸಿದ ತತ್ವಗಳು ಇಂದಿಗೂ ಪ್ರಸ್ತುತವಾಗಿದೆ. ಬಸವ ತತ್ವ ಮತ್ತು ಆದರ್ಶಗಳು ಎಲ್ಲ ಕಡೆಗಳಿಗೆ ಪ್ರಸಾರವಾಗಲು ರಾಜ್ಯದ ಹಲವಾರು ಮಠಗಳ ಶ್ರಮದಿಂದ ಸಾಧ್ಯವಾಗಿದೆ. ಜನ ಸಾಮಾನ್ಯರಿಗೆ ಧಾರ್ಮಿಕ ವಿಚಾರ ಗಳನ್ನು ಮುಟ್ಟಿಸಿ ಅಸಮಾನತೆಯನ್ನು ಹೊಗಲಾಡಿಸುವ ಕಾರ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಉಡುಪಿ ಬಸವ ಸಮಿತಿಯ ಗೌರವಾಧ್ಯಕ್ಷ ಡಾ.ಜಿ.ಎಸ್.ಚಂದ್ರಶೇಖರ್ ಮಾತನಾಡಿ, ಯಾವುದೇ ಜಾತಿ, ಮತ, ಲಿಂಗ ಬೇಧ ಇಲ್ಲದೆ ಎಲ್ಲರೂ ವಿಶ್ವ ಮಾನವರು ಎಂಬುದನ್ನು ಸಾಧಿಸಲು ಈಗಲೂ ನಮಗೆ ಸಾಧ್ಯವಿದೆ. ಆದುದ ರಿಂದ ಎಲ್ಲರೂ ಒಂದಾಗಿ ಈ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.
ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯಾಯ ಮಾತನಾಡಿ, ಅನುಭವ ಮಂಟಪದಲ್ಲಿ ಸೃಜಿಸಿದ ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಅತ್ಯುತ್ತಮ ಸಾಹಿತ್ಯಗಳಾಗಿವೆ. ಜಗತ್ತಿನ ಸಾಹಿತ್ಯಕ್ಕೆ ನೀಡಿರುವ ಬಹಳ ದೊಡ್ಡ ಕನ್ನಡದ ಕೊಡುಗೆ ಅಂದರೆ ಅದು ವಚನ ಸಾಹಿತ್ಯವಾಗಿದೆ. ವಚನ ಸಾಹಿತ್ಯ ಬೇರೆ ಭಾಷೆಗಳಿಗೆ ಅನುವಾದಗೊಂಡು ಜಗತ್ತಿನ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ವಸ್ತುವಾಗಿದೆ. ಇಂದು ವಚನ ಸಾಹಿತ್ಯ ಭಾರತದ ಎಲ್ಲ ಭಾಷೆಗಳಿಗೂ ಅನು ವಾದಗೊಂಡಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕಲ್ಯಾಣ ಅರ್ಥಪೂರ್ಣ ಆಗಿದೆ ಎಂದರು.
ಅಸಮಾನತೆ ವಿರುದ್ಧ 12 ಶತಮಾನದಲ್ಲಿ ಚಳವಳಿ ನಡೆದರೂ ಇದೀಗ 900 ವರ್ಷಗಳ ನಂತರವೂ ಸಮಾಜ ಕೆಲವರು ಹೆಣ್ಣು ಮಕ್ಕಳು ಹಾಗೂ ಅಂತರ್ ಜಾತಿ ವಿವಾಹದ ಬಗ್ಗೆ ಇನ್ನು ಕೆಳಮಟ್ಟದಲ್ಲಿ ಯೋಚನೆ ಮಾಡುತ್ತಿರುವುದು ದುರಂತ. ಅಂತಹ ಮನಸ್ಥಿತಿಯ ವಿರುದ್ಧ ಹೊಸ ತಲೆಮಾರು ಯೋಚಿಸುವಂತೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮತ್ತೆ ಕಲ್ಯಾಣ ಸ್ವಾಗತ ಸಮಿತಿಯ ಅಧ್ಯಕ್ಷ ಯು.ಸಿ.ನಿರಂಜನ್ ವಹಿಸಿದ್ದರು. ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್, ಉಡುಪಿ ಬಸವ ಸಮಿತಿಯ ಅಧ್ಯಕ್ಷ ಜಿ.ಎಂ.ಪಾಟೀಲ, ಉಪಾಧ್ಯಕ್ಷ ಪ್ರೊ.ಸಿದ್ದ ರಾಮಣ್ಣ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಬ್ದುಲ್ ಅಝೀಝ್ ಉದ್ಯಾವರ, ದಲಿತ ಮುಖಂಡ ಶ್ಯಾಮ್‌ರಾಜ್ ಬಿರ್ತಿ ಉಪಸ್ಥಿತರಿದ್ದರು. ದಿನಕರ ಎಸ್.ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.








