ಅಭಿವೃದ್ಧಿಯು ಗುಂಡುಗಳು, ಬಾಂಬ್‌ಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ: ‘ಮನ್ ಕಿ ಬಾತ್’ ನಲ್ಲಿ ಪ್ರಧಾನಿ ಮೋದಿ

ಹೊಸದಿಲ್ಲಿ,ಜು.28: ಕಾಶ್ಮೀರದಲ್ಲಿ ದ್ವೇಷವನ್ನು ಹರಡಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ತೊಡಕುಗಳನ್ನುಂಟು ಮಾಡಲು ಯತ್ನಿಸುತ್ತಿರುವವರು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ತನ್ನ ಮಾಸಿಕ ’ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಹೇಳಿದರು.
ಅಭಿವೃದ್ಧಿಯು ಗುಂಡುಗಳು,ಬಾಂಬ್‌ಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಹೇಳಿದ ಅವರು ತನ್ನ ಮಾತಿಗೆ ಸಮರ್ಥನೆಯಾಗಿ ಸರಕಾರದ ಇತ್ತೀಚಿನ ಕಾರ್ಯಕ್ರಮವೊಂದನ್ನು ಉಲ್ಲೇಖಿಸಿದರು. ಕಳೆದ ಜೂನ್‌ನಲ್ಲಿ ಜಮ್ಮು-ಕಾಶ್ಮೀರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮರಳಿ ಗ್ರಾಮಕ್ಕೆ ’ ಕಾರ್ಯಕ್ರಮದಲ್ಲಿ ಸ್ಥಳೀಯರೊಂದಿಗೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲು ಇದೇ ಮೊದಲ ಬಾರಿಗೆ ಸರಕಾರಿ ಅಧಿಕಾರಿಗಳು ಅತ್ಯಂತ ಸೂಕ್ಷ್ಮ ಮತ್ತು ದೂರದ ಪ್ರದೇಶಗಳಲ್ಲಿಯ 4,500 ಪಂಚಾಯತ್‌ಗಳ ವ್ಯಾಪಿಯ ಗ್ರಾಮಗಳಿಗೆ ತೆರಳಿದ್ದರು. ಎಲ್ಲ ಕಡೆಗಳಲ್ಲಿಯೂ ಗ್ರಾಮಸ್ಥರು ಅತ್ಯುತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆರು. ಕಾಶ್ಮೀರದ ಜನರು ಅಭಿವೃದ್ಧಿಯ ಮುಖ್ಯ ವಾಹಿನಿಯನ್ನು ಸೇರಲು ಎಷ್ಟೊಂದು ಕಾತುರರಾಗಿದ್ದಾರೆ ಎನ್ನುವುದನ್ನು ಇದು ತೋರಿಸುತ್ತಿದೆ. ಇಂತಹ ಕಾರ್ಯಕ್ರಮಗಳು ಮತ್ತು ಅವುಗಳಲ್ಲಿ ಜನರ ಪಾಲ್ಗೊಳ್ಳುವಿಕೆಗಳು ಕಾಶ್ಮೀರದ ಜನತೆ ಉತ್ತಮ ಆಡಳಿತವನ್ನು ಬಯಸುತ್ತಿದ್ದಾರೆ ಎನ್ನುವುದಕ್ಕೆ ನಿದರ್ಶನವಾಗಿವೆ ಎಂದು ಪ್ರಧಾನಿ ನುಡಿದರು.
ಅಧಿಕಾರಿಗಳು ಗಡಿಯಾಚೆಯಿಂದ ಗುಂಡಿನ ಹಾರಾಟದ ಭೀತಿಯಲ್ಲಿ ಬದುಕುತ್ತಿರುವ ಗಡಿ ಗ್ರಾಮಗಳಿಗೆ ಮತ್ತು ಇತ್ತಿಚಿಗೆ ಹೆಚ್ಚಿನ ಭಯೋತ್ಪಾದಕ ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದ ಜಿಲ್ಲೆಗಳಲ್ಲಿಯ ಸೂಕ್ಷ್ಮಗ್ರಾಮಗಳಿಗೂ ಯಾವುದೇ ಭೀತಿಯಲ್ಲದೆ ಭೇಟಿ ನೀಡಿದ್ದಾರೆ ಎಂದರು.
ಜು.1ರಿಂದ ಮೂರು ಲಕ್ಷಕ್ಕೂ ಅಧಿಕ ಯಾತ್ರಿಗಳು ಅಮರನಾಥ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಇದು 2015ರಲ್ಲಿ 60 ದಿನಗಳ ಅವಧಿಯಲ್ಲಿನ ಯಾತ್ರಿಕರ ಸಂಖ್ಯೆಯನ್ನು ಮೀರಿಸಿದೆ ಎಂದರು. ರಾಜ್ಯದ ಜನರ ಆತಿಥ್ಯವನ್ನು ಪ್ರಶಂಸಿಸಿದ ಅವರು,ಇದು ಪ್ರವಾಸೋದ್ಯಮಕ್ಕೆ ಒತ್ತು ನೀಡಲಿದೆ ಎಂದರು.
ಉತ್ತರಾಖಂಡದಲ್ಲಿ ಚಾರ್ ಧಾಮ್ ಯಾತ್ರೆಯೂ ಭಾರೀ ಯಶಸ್ವಿಯಾಗಿದೆ ಎಂದ ಮೋದಿ,ಎಂಟು ಲಕ್ಷಕ್ಕೂ ಅಧಿಕ ಯಾತ್ರಿಗಳು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ. ಇದು 2013ರ ವಿನಾಶಕಾರಿ ಪ್ರವಾಹದ ನಂತರ ದಾಖಲೆಯ ಸಂಖ್ಯೆಯಾಗಿದೆ ಎಂದರು.
ಆ.15ನ್ನು ವಿಶೇಷ ಸಿದ್ಧತೆಗಳೊಂದಿಗೆ ಆಚರಿಸುವಂತೆ ಹಾಗೂ ಅದನ್ನು ಜನಪದ ಮತ್ತು ಜನರ ಉತ್ಸವವನ್ನಾಗಿ ಆಚರಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಜನತೆಗೆ ಅವರು ಸೂಚಿಸಿದರು.
ಜಲ ಸಂರಕ್ಷಣೆಯ ಸಮಸ್ಯೆ ದೇಶವನ್ನು ಕಾಡುತ್ತಿದೆ ಎಂದ ಮೋದಿ,ಜಲನೀತಿಯನ್ನು ರೂಪಿಸಿದ್ದಕ್ಕಾಗಿ ಮೇಘಾಲಯ ಸರಕಾರವನ್ನು ಮತ್ತು ಕಡಿಮೆ ನೀರು ಅಗತ್ಯವಾಗಿರುವ ಕೃಷಿಯಲ್ಲಿ ತೊಡಗುವಂತೆ ರೈತರನ್ನು ಉತ್ತೇಜಿಸುತ್ತಿರುವುದಕ್ಕಾಗಿ ಹರಿಯಾಣಾ ಸರಕಾರವನ್ನು ಪ್ರಶಂಸಿಸಿದರು.







