ಉಡುಪಿ: ಗಡಿಬಿಡಿಯಲ್ಲಿ ಬೇರೆ ರೈಲನ್ನೇರಿದ ಮಹಿಳೆ
ಬೈಂದೂರಿನಲ್ಲಿ ರೈಲಿನಿಂದ ಹಾರಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲು

ಸಾಂದರ್ಭಿಕ ಚಿತ್ರ
ಉಡುಪಿ, ಜು.28: ಗಡಿಬಿಡಿಯಲ್ಲಿ ಉಡುಪಿಯ ರೈಲು ನಿಲ್ದಾಣದಲ್ಲಿ ಬೇರೆ ರೈಲನ್ನೇರಿದ 22ರ ಹರೆಯದ ಮಹಿಳೆಯೊಬ್ಬರು ಬೈಂದೂರು ರೈಲು ನಿಲ್ದಾಣದಲ್ಲಿ ವೇಗವಾಗಿ ಚಲಿಸುತಿದ್ದ ರೈಲಿನಿಂದ ಹೊರಗೆ ಹಾರಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಸಂಜೆಯ ವೇಳೆ ನಡೆದಿದೆ.
ಘಟನೆಯ ಕುರಿತು ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ ಕೊಂಕಣ ರೈಲ್ವೆಯ ರೈಲ್ವೆ ಸುರಕ್ಷತಾ ಪಡೆ (ಆರ್ಪಿಎಫ್), ಸಂಜೆ 7:20ರ ಸುಮಾರಿಗೆ ರೈಲು ನಂ.22655 ಟಿವಿಸಿ ನಿಝಾಮುದ್ದೀನ್ ಎಕ್ಸ್ಪ್ರೆಸ್ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದೆ.
ಮಣಿಪಾಲದಲ್ಲಿ ಉದ್ಯೋಗದಲ್ಲಿರುವ ಈ ಮಹಿಳೆ ನಿನ್ನೆ ಸಂಜೆ ಬೈಂದೂರಿಗೆ ತೆರಳಲು ಮಂಗಳೂರು ಜಂಕ್ಷನ್-ಮುಂಬೈ ಸಿಎಸ್ಟಿ (ರೈಲು ನಂ. 12134) ಹತ್ತಬೇಕಾದವರು ತಪ್ಪಿ ತಿರುವನಂತಪುರಂ-ಹಝ್ರತ್ ನಿಝಾಮುದ್ದೀನ್ ಎಕ್ಸ್ಪ್ರೆಸ್ ರೈಲನ್ನೇರಿದ್ದರು. ಆದರೆ ಈ ರೈಲಿಗೆ ಉಡುಪಿ ಬಿಟ್ಟ ನಂತರ ಕೇವಲ ಕಾರವಾರದಲ್ಲಿ ನಿಲುಗಡೆ ಇತ್ತು. ಈ ರೈಲು 6:35ರಿಂದ 7:16ರವರೆಗೆ ಕ್ರಾಸಿಂಗ್ ಗಾಗಿ ಬಿಜೂರು ನಲ್ಲಿ ನಿಂತಿತ್ತು ಎಂದು ತಿಳಿದುಬಂದಿದೆ.
ರೈಲು ಬೈಂದೂರು ನಿಲ್ದಾಣದಲ್ಲಿ ನಿಲ್ಲದಿರುವ ವಿಷಯವನ್ನು ತಡವಾಗಿ ಅರಿತ ಜನರಲ್ ಕೋಚ್ನಲ್ಲಿದ್ದ ಯುವತಿ ಬೈಂದೂರು ನಿಲ್ದಾಣ ದಾಟುತಿದ್ದಂತೆ ವೇಗವಾಗಿ ಚಲಿಸುತಿದ್ದ ರೈಲಿನಿಂದ ಕೆಳಕ್ಕೆ ಧುಮುಕಿದ್ದರು. ತಲೆಗೆ ತೀವ್ರವಾಗಿ ಹಾಗೂ ದೇಹದ ಉಳಿದ ಭಾಗಗಳಿಗೆ ಗಾಯವಾಗಿ ರಕ್ತ ಸುರಿಯುತಿದ್ದ ಯುವತಿಯನ್ನು ಆಕೆಯನ್ನು ಕರೆದೊಯ್ಯಲು ರೈಲು ನಿಲ್ದಾಣಕ್ಕೆ ಆಗಮಿಸಿದ್ದ ತಮ್ಮ, ಅಟೋರಿಕ್ಷಾದಲ್ಲಿ ಕೂಡಲೇ ಬೈಂದೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಯುವತಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ನಿಝಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತಿದ್ದ ರೂಪೇಶ್ ತಲೇಕರ್ ಎಂಬ ಪ್ರಯಾಣಿಕ ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದು, ತಕ್ಷಣವೇ ರೈಲ್ವೆ ಸಹಾಯವಾಣಿ (182)ಗೆ ಕರೆ ಮಾಡಿ ಬಾರಕೂರು-ಭಟ್ಕಳ ನಿಲ್ದಾಣದ ನಡುವೆ ಮಹಿಳೆ ಯೊಬ್ಬರು ರೈಲಿನಿಂದ ಹಾರಿದ್ದಾರೆ ಎಂದು ಮಾಹಿತಿ ನೀಡಿದ್ದರು. ಈ ಮಾಹಿತಿ ಯಂತೆ ಆರ್ಪಿಎಫ್ ವಿಚಾರಣೆ ನಡೆಸಿದಾಗ, ಬೈಂದೂರು ನಿಲ್ದಾಣದಲ್ಲಿ ಘಟನೆ ನಡೆದಿರುವುದು ತಿಳಿದುಬಂತು ಎಂದು ಹೇಳಿಕೆ ತಿಳಿಸಿದೆ.
ಆರ್ಪಿಎಫ್ ಮನವಿ
ಕೊಂಕಣ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲು ಸುರಕ್ಷತಾ ಪಡೆ (ಆರ್ಪಿಎಫ್) ಮನವಿಯೊಂದನ್ನು ಮಾಡಿದ್ದು, ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿಗದಿತ ಸಮಯಕ್ಕಿಂತ 10ನಿಮಿಷ ಮೊದಲೇ ರೈಲು ನಿಲ್ದಾಣಕ್ಕೆ ಬರುವಂತೆ ಹಾಗೂ ತಾವೇರುವ ರೈಲಿನ ಕುರಿತು ಸರಿಯಾಗಿ ಮಾಹಿತಿ ಸಂಗ್ರಹಿಸುವಂತೆ ವಿನಂತಿಸಿದೆ.
ಓಡುತ್ತಿರುವ ರೈಲಿನಿಂದ ಯಾವತ್ತೂ ಹೊರಗೆ ಜಿಗಿಯುವ ಸಾಹಸಕ್ಕೆ ಕೈಹಾಕದಂತೆಯೂ ಮನವಿ ಮಾಡಿದೆ. ತುರ್ತು ಸಂದರ್ಭಗಳಲ್ಲಿ ರೈಲ್ವೆ ಸಹಾಯವಾಣಿ 182ನ್ನು ಸಂಪರ್ಕಿಸುವಂತೆಯೂ ಆರ್ಪಿಎಫ್ ಹೇಳಿಕೆಯಲ್ಲಿ ತಿಳಿಸಿದೆ.







