ಮಕ್ಕಳ ಅಪಹರಣ ಪ್ರಕರಣಗಳ ಸುಳ್ಳು ಸುದ್ದಿ ಪ್ರಸಾರ: ಕಿಡಿಗೇಡಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು
ಪೊಲೀಸ್ ಇಲಾಖೆ ಎಚ್ಚರಿಕೆ
ಉಡುಪಿ, ಜು.28: ಮಕ್ಕಳ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿ ಯಾವುದೇ ಸುಳ್ಳು ಸುದ್ದಿ/ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ/ಪ್ರಸರಿಸುವ/ಫಾರ್‌ವರ್ಡ್ ಮಾಡುವ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಅಂತಹ ವ್ಯಕ್ತಿಗಳ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ಮಕ್ಕಳ ಅಪಹರಣ ಸಂಬಂಧಿಸಿದಂತೆ ಸುಳ್ಳು ಸಂದೇಶಗಳು ಆಧಾರ ರಹಿತ ವಾಗಿದ್ದು, ಪ್ರಸ್ತುತ ವರ್ತಮಾನದಲ್ಲಿ ಇಂತಹ ಸುದ್ದಿಗಳಿಗೆ ಸಾರ್ವಜನಿಕರು ಸಮೂಹ ಸನ್ನೆಗೆ ಒಳಗಾಗಿ ಅಪರಿಚಿತರು, ಅಮಾಯಕರು, ಆಗಂತಕರ ಜೀವ ಗಳನ್ನು ಬಲಿ ತೆಗೆದುಕೊಳ್ಳುವ ಹಲವು ಘಟನೆ ಗಳು ಹಲವು ಕಡೆಗಳಲ್ಲಿ ನಡೆದಿವೆ. ಮಕ್ಕಳ ಕಳ್ಳರ ಬಗ್ಗೆ ಕೆಲವು ನಕಲಿ ಫೋಟೋಗಳನ್ನು ಹಾಕಿ, ಬೇರೆ ಎಲ್ಲಿಯೋ ನಡೆದ ಘಟನೆಯನ್ನು ಇಲ್ಲಿಯೇ ನಡೆದಿದೆ ಎಂಬಂತೆ ಬಿಂಬಿಸಿ ಭಯದ ವಾತಾವಣ ಸೃಷ್ಟಿ ಮಾಡಿ, ಅಶಾಂತಿಗೆ ಕಾರಣರಾಗುತ್ತಿದ್ದಾರೆ.
ಮಕ್ಕಳ ಕಳ್ಳತನದ ಬಗ್ಗೆ ಯಾರೂ ಕೂಡ ಇಂತಹ ಸಂದೇಶಗಳನ್ನು ಹರಿಯಬಿಡ ಬಾರದು. ಇಂತಹ ಸಂದೇಶಗಳು ಬೇರೆ ಕಡೆಯಿಂದ ಬಂದಲ್ಲಿ, ಉಹಾಪೋಹ ಗಳು ಹುಟ್ಟಿಕೊಳ್ಳುವ ಮೊದಲೇ ಅದನ್ನು ಚಿವುಟಿ ಹಾಕಬೇಕು. ಇದರಿಂದ ಎಷ್ಟೋ ಅನಾಹುತಗಳು ತಪ್ಪುತ್ತದೆ. ಈ ಬಗ್ಗೆ ನಾಗರೀಕ ಸಮಾಜ ಯಾವುದೇ ಉದಾಸೀನ ತೋರಬಾರದು.
ಮಕ್ಕಳ ಹಕ್ಕುಗಳ ವಿಚಾರದಲ್ಲಿ ಪೊಲೀಸ್ ಇಲಾಖೆ ವಿಶೇಷ ಮುರ್ತುವರ್ಜಿ ವಹಿಸಿದ್ದು, ಒಂದು ವೇಳೆ ಇಂತಹ ಘಟನೆಗಳು ನಡೆದ ಪಕ್ಷದಲ್ಲಿ ಕೂಡಲೇ ತನಿಖೆ ಕೈಗೊಂಡು ಪ್ರಕರಣವನ್ನು ಭೇದಿಸಿ, ನಾಗರಿಕರ ಜೊತೆ ಪೊಲೀಸ್ ಇಲಾಖೆ ಸದಾ ಸಿದ್ದವಿದೆ ಎಂದು ಇಲಾಖೆ ಸ್ಪಷ್ಟ ಸಂದೇಶ ನೀಡಿದೆ.
ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ (0820-2526444/100) ಅಥವಾ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆ(0820-2530021)ಯನ್ನು ಸಂಪರ್ಕಿಸಲು ಇಾಖೆ ಸಾರ್ವಜನಿಕರಲ್ಲಿ ವಿನಂತಿ ಮಾಡಿದೆ.
ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ: ಎಚ್ಚರಿಕೆ
ಮಕ್ಕಳ ಅಪಹರಣಕ್ಕೆ ಸಂಬಂಧಿಸಿ ಯಾವುದೇ ಪ್ರದೇಶ, ಗ್ರಾಮಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ ಹಾಗೂ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು. ಅಪರಿಚಿತರ ಮೇಲೆ ಏಕಾಎಕಿ ಹಲ್ಲೆ, ಕೊಲೆ ಯತ್ನ ದಂತಹ ಕೃತ್ಯಗಳಿಗೆ ನಾಗರಿಕರು ಪ್ರಚೋದನೆಗೆ ಒಳಗಾಗಬಾರದು. ಒಂದು ವೇಳೆ ಕಾನೂನನ್ನು ಕೈಗೆತ್ತಿಕೊಂಡರೆ ಅಂತಹಾ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಜರಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಅನುಮಾನಾಸ್ಪದ ವಿಚಾರಗಳು ಕಂಡು ಬಂದಾಗ ಈ ಮಾಹಿತಿಯನ್ನು ಬೀಟ್ ಸಿಬ್ಬಂದಿಯವರಿಗಾಗಲಿ/ ಪೊಲೀಸ್ ಠಾಣೆಗಾಗಲಿ/ ಜಿಲ್ಲಾ ಕಂಟ್ರೋಲ್ ರೂಮ್ ಫೋನ್ ನಂಬ್ರ 0820-2526444 ಅಥವಾ 100ಕ್ಕೆ ಮಾಹಿತಿಯನ್ನು ನೀಡಿ, ಸಂಭವನೀಯ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.







