ಶಾಸಕರ ಅನರ್ಹತೆ ಬಿಜೆಪಿಗೆ ಖುಷಿ ಕೊಟ್ಟಿದೆ: ಬಸವರಾಜ್ ಹೊರಟ್ಟಿ
![ಶಾಸಕರ ಅನರ್ಹತೆ ಬಿಜೆಪಿಗೆ ಖುಷಿ ಕೊಟ್ಟಿದೆ: ಬಸವರಾಜ್ ಹೊರಟ್ಟಿ ಶಾಸಕರ ಅನರ್ಹತೆ ಬಿಜೆಪಿಗೆ ಖುಷಿ ಕೊಟ್ಟಿದೆ: ಬಸವರಾಜ್ ಹೊರಟ್ಟಿ](https://www.varthabharati.in/sites/default/files/images/articles/2019/07/28/202700-1564331610.gif)
ಧಾರವಾಡ, ಜು.28: ಅತೃಪ್ತ ಶಾಸಕರ ಅನರ್ಹತೆ ನಿರ್ಧಾರ ಬಿಜೆಪಿಗೆ ಒಳಗೊಳಗೇ ಖುಷಿ ಕೊಟ್ಟಿದ್ದು, ಅತೃಪ್ತರ ಕಾಟ ಬಿಜೆಪಿಗೆ ತಪ್ಪಿದಂತಾಗಿದೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ರಮೇಶ್ ಕುಮಾರ್ ಕಾನೂನು ನೋಡಿಕೊಂಡು ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದಾರೆ. ಅವರು ಸುಪ್ರಿಂಕೋರ್ಟ್ಗೆ ಹೋದರೆ ಯಾವುದು ಸರಿ, ಯಾವುದು ತಪ್ಪು ಎನ್ನುವುದು ತಿಳಿಯುತ್ತದೆ ಎಂದು ಅವರು ಹೇಳಿದರು.
ಒಂದು ಪಕ್ಷದಿಂದ ಗೆದ್ದು ನಂತರ ರಾಜೀನಾಮೆ ನೀಡಿದರೆ ಮುಂದಿನ ಐದು ವರ್ಷದ ಅವಧಿಯೊಳಗೆ ಯಾವುದೇ ಚುನಾವಣೆಗೆ ಸ್ಪರ್ಧಿಸಬಾರದು ಅಂತಹ ಕಾನೂನು ಜಾರಿಯಾಗಬೇಕು. ಈ ಮೂಲಕ ರಾಜಕಾರಣದಲ್ಲಿ ಕಟ್ಟುನಿಟ್ಟಿನ ಕಾನೂನು ಬರಬೇಕು. ಇಂತಹ ಒಂದು ಕಾನೂನನ್ನು ಮೋದಿಯವರೇ ತರಬೇಕು. ಮೋದಿಯವರು ದೇಶದ ಬಗ್ಗೆ ಬಹಳ ಮಾತನಾಡುತ್ತಾರೆ. ಹೀಗಾಗಿ ರಾಜಕಾರಣದಲ್ಲಿ ಕಟ್ಟುನಿಟ್ಟಿನ ಕಾನೂನನ್ನು ಅವರೇ ತರಬೇಕು ಎಂದು ಆಗ್ರಹಿಸಿದರು.
ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ: ಶಾಸಕರ ಕುದುರೆ ವ್ಯಾಪಾರ ವಿಚಾರವಾಗಿ ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಸ್ಪೀಕರ್ ನಡೆ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲ ಕಾಯ್ದೆ ಕಾನೂನು ನೋಡಿ ಅವರು ಅನರ್ಹ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ಕೊಟ್ಟ ಬಳಿಕ ಅವರು ಸದನದಲ್ಲಿ ಇರಬೇಕಿತ್ತು. ಹೀಗಾಗಿ ರಾಜೀನಾಮೆ ಅಂಗೀಕರಿಸದೇ ಅನರ್ಹ ಮಾಡಲಾಗಿದೆ. ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತಿದ್ದರೆ ಅಂಗೀಕಾರ ಆಗುತ್ತಿತ್ತು. ಆದರೆ, ಅವರು ನಿಯಮ ಪಾಲಿಸಿಲ್ಲ. ಎಲ್ಲರೂ ಒಟ್ಟಾಗಿ ಮುಂಬೈ ಹೋಟೆಲ್ಗೆ ತೆರಳಿದ್ದಾರೆ. ಹೀಗಾಗಿ ರಾಜೀನಾಮೆ ಅಂಗೀಕಾರ ಬದಲಿಗೆ ಅನರ್ಹ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿಗೆ ಜೆಡಿಎಸ್ ನೈತಿಕ ಬೆಂಬಲ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಬಿಜೆಪಿ ಬಳಿ ಕಡಿಮೆ ಬಹುಮತ ಇದೆ. ಹೊತ್ತು ಬಂದಂತೆ ಕೊಡೆ ಹಿಡಿಯೋದು ಸರಿಯಲ್ಲ. ಜಿ.ಟಿ.ದೇವೇಗೌಡರು ಬಿಜೆಪಿ ನೈತಿಕ ಬೆಂಬಲ ಕೊಡೋ ವಿಚಾರ ಹೇಳಿದ್ದು ಸರಿಯಲ್ಲ.
-ಬಸವರಾಜ ಹೊರಟ್ಟಿ, ಜೆಡಿಎಸ್ ಮುಖಂಡ