ಹಿರಿಯರ ಪರಂಪರೆ ಯುವ ಪೀಳಿಗೆಗೆ ಪ್ರೇರಣೆ-ಪತ್ರಕರ್ತ ವಸಂತ ಕುಮಾರ್
ಪುತ್ತೂರು ಕುಲಾಲ ಸಂಘದಿಂದ ಆಟಿದಕೂಟ ಕಾರ್ಯಕ್ರಮ

ಪುತ್ತೂರು : ಆಧುನಿಕ ಜಗತ್ತಿಗೆ ಮಾರು ಹೋಗಿ ಹಿಂದಿನ ಪಾರಂಪರಿಕ ಬದುಕು, ಸಂಸ್ಕೃತಿಯನ್ನು ಯಾರೂ ಮರೆಯಬಾರದು. ಆಚರಣೆಗಳ ಮೂಲಕ ನಮ್ಮ ಸಂಸ್ಕೃತಿ-ಪರಂಪರೆ, ಹಿರಿಯರ ಬದುಕಿನ ಉತ್ತಮ ಸಂದೇಶಗಳನ್ನು ಯುವ ಪೀಳಿಗೆಗೆ ತಲುಪಿಸುವ ಮೂಲಕ ಮುಂದಿನ ಜನಾಂಗದ ಭವಿಷ್ಯಕ್ಕೆ ಪ್ರೇರಣೆ ನೀಡುವ ಕೆಲಸ ಆಗಬೇಕು ಎಂದು ಪತ್ರಕರ್ತ ವಸಂತ ಕುಮಾರ್ ಅವರು ಹೇಳಿದರು.
ಪುತ್ತೂರಿನ ರೋಟರಿ ಮನಿಷಾ ಸಭಾಂಗಣದಲ್ಲಿ ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ವನಮಹೋತ್ಸವ, ಸಸಿ ವಿತರಣೆ ಹಾಗೂ ಆಟಿದ ಕೂಟ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ದ.ಕ.ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಜತೆ ಕಾರ್ಯದರ್ಶಿ ಭಾರತಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಹಿಂದಿನ ಕೂಡು ಕುಟುಂಬ ಪದ್ಧತಿಯಿಂದಾಗಿ ತುಳುನಾಡಿನ ಕಟ್ಟುಕಟ್ಟಲೆಗಳು ಉಳಿಸಿಕೊಂಡು ಬಂದಿದೆ. ಪ್ರಸ್ತುತ ನಡೆಯುವ ಆಚರಣೆಗಳಲ್ಲಿ ಹಿರಿಯರ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಬೇಕು. ನಮ್ಮ ಸಂಸ್ಕೃತಿಯು ವಿಕೃತಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮುದಾಯದ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಎಸ್.ಕುಲಾಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಕೆ ಅವರು ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು, ಬೆಳ್ತಂಗಡಿ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಹರೀಶ ಕಾರಿಂಜ, ಗುತ್ತಿಗೆದಾರ ಆನಂದ ಪಡೀಲು, ಸಂಘದ ನಿಕಟಪೂರ್ವ ಅಧ್ಯಕ್ಷ ಪಿ.ವಿ.ದಿನೇಶ್ ಕುಲಾಲ್ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಕೃಷ್ಣ ಯಂ.ಅಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯದರ್ಶಿ ಮಹೇಶ್ ಕೆ. ಸವಣೂರು ಸ್ವಾಗತಿಸಿದರು. ನವೀನ್ ಕುಲಾಲ್ ನಿರೂಪಿಸಿದರು.







