ಯುವತಿಯನ್ನು ರಕ್ಷಿಸಿದ ನರ್ಸ್‍ಗೆ ನ್ಯಾಶನಲ್ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿ

ಕೊಣಾಜೆ: ದೇರಳಕಟ್ಟೆ ಸಮೀಪದ ಬಗಂಬಿಲದಲ್ಲಿ ದೀಕ್ಷಾ ಎಂಬ ಯುವತಿಯನ್ನು ಯುವಕನೋರ್ವ ಚೂರಿಯಿಂದ ಇರಿದು ಕೊಲೆಯ ಯತ್ನಿಸು ತ್ತಿದ್ದಾಗ ಪ್ರಾಣದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ದಾದಿ ನಿಮ್ಮಿ ಸ್ಟೀಫನ್ ಅವರು ಬೆಂಗಳೂರಿನಲ್ಲಿ ರವಿವಾರ ನ್ಯಾಶನಲ್ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಪಡೆದುಕೊಂಡರು.
ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ದಾದಿ ನಿಮ್ಮಿ ಸ್ಟೀಫನ್ ಅವರು ತಿಂಗಳ ಹಿಂದೆ ಬಗಂಬಿಲ ಬಳಿ ಶಕ್ತಿನಗರದ ಯುವಕನೋರ್ವ ವಿದ್ಯಾರ್ಥಿನಿ ದೀಕ್ಷಾ ಎಂಬ ಯುವತಿಗೆ ಪ್ರೀತಿಯ ನಿರಾಕರಣೆಯ ನೆಪವೊಡ್ಡಿ ಚೂರಿಯಿಂದ ಹಲವಾರು ಬಾರಿ ಇರಿದು ಕೊಲೆಗೆ ಯತ್ನಿಸಿದಲ್ಲದೆ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆ ಸಂದರ್ಭದಲ್ಲಿ ಅಲ್ಲಿ ಜನರು ಸೇರಿ ಮೊಬೈಲ್‍ನಲ್ಲಿ ದೃಶ್ಯಾವಳಿ ಸೆರೆ ಹಿಡಿಯುತ್ತಿದ್ದರೂ ಯಾರೂ ಕೂಡಾ ಭಯದಿಂದ ಯುವತಿಯ ರಕ್ಷಣೆಗೆ ಮುಂದಾಗಿರಲಿಲ್ಲ. ಆದರೆ ಈ ಕಠಿಣ ಸಂದರ್ಭದಲ್ಲಿ ಇಲ್ಲಿಗೆ ಬಂದ ನರ್ಸ್ ನಿಮ್ಮಿ ಅವರು ಜೀವದ ಹಂಗು ತೊರೆದು ಯುವಕನಿಂದ ಚೂರಿ ಕಸಿದುಕೊಂಡು ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೀಕ್ಷಾ ಇದೀಗ ಚೇತರಿಸಿಕೊಂಡು ವಾರ್ಡ್‍ಗೆ ಸ್ಥಳಾಂತರಗೊಂಡಿದ್ದಾರೆ.
ಜೀವದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ನಿಮ್ಮಿ ಅವರ ಸಾಹಸಕ್ಕೆ ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ನಿಮ್ಮಿ ಸ್ಟೀಫನ್ ಅವರು ಬೆಂಗಳೂರಿನಲ್ಲಿ ನ್ಯಾಶನಲ್ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.





