ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ: ಕೇಸು ದಾಖಲು

ಮಂಗಳೂರು, ಜು. 28: ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧದ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ರವಿವಾರ ನಗರದಲ್ಲಿ ನಿಯಮ ಉಲ್ಲಂಘಿಸಿ ಫುಟ್‌ಪಾತ್‌ನಲ್ಲೇ ವಾಹನ ಪಾರ್ಕಿಂಗ್ ಮಾಡಿದ ಹಲವು ವಾಹನಗಳ ವಿರುದ್ಧ ಕೇಸು ದಾಖಲಿಸಲಾಗಿದೆ.
ನಗರದ ಟಿಎಂಎ ಪೈ ಸಭಾಂಗಣದ ಮುಂಭಾಗದ ಫುಟ್‌ಪಾತ್‌ನಲ್ಲಿ ಪಾರ್ಕ್ ಮಾಡಿದ 25 ವಾಹನಗಳ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಅಲ್ಲದೆ, ಕಾರ್ಯಕ್ರಮ ಆಯೋಜಿಸಿ, ಬಂದ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸದ ಟಿಎಂಎ ಪೈ ಸಭಾಂಗಣದ ಮಾಲಕರು, ಮ್ಯಾನೇಜರ್ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಎಂಎ ಪೈ ಸಭಾಂಗಣದಲ್ಲಿ ರವಿವಾರ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಮದುವೆಗೆ ಬಂದಿದ್ದ ಅನೇಕರು ತಮ್ಮ ಕಾರು ಸೇರಿದಂತೆ ಇತರ ವಾಹನಗಳನ್ನು ರಸ್ತೆಬದಿಯ ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿದ್ದರು. ಇದರಿಂದ ಪಾದಚಾರಿಗಳಿಗೆ ನಡೆದಾಡಲು ತ್ರಾಸದಾಯಕವಾದ್ದರಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 283 (ಸಾರ್ವಜನಿಕ ಅಡಚಣೆ) ಅಡಿ ಪ್ರಕರಣ ದಾಖಲಾಗಿದೆ.





