ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದಿಂದಾಗಿ ದೇಶದ ಆರ್ಥಿಕತೆ ವಿನಾಶದತ್ತ: ವಸಂತ ಆಚಾರಿ

ಮಂಗಳೂರು: 1990ರ ದಶಕದ ನಂತರ ದೇಶದೆಲ್ಲೆಡೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳು ಹೆಚ್ಚೆಚ್ಚು ಜಾರಿಗೊಳ್ಳುತ್ತಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ತೀವ್ರ ವೇಗವನ್ನು ಪಡೆಯುತ್ತಿದೆ. ಅಮೆರಿಕನ್ ಸಾಮ್ಯಾಜ್ಯ ಶಾಹಿಗಳು ಭಾರತವನ್ನು ಕಿರಿಯ ಪಾಲುದಾರರನ್ನಾಗಿಸುವ ಮೂಲಕ ಜಾಗತಿಕ ಬಂಡವಾಳ ಶಾಹಿಗಳು ಭಾರತವನ್ನು ತನ್ನ ಮಾರುಕಟ್ಟೆಯನ್ನಾಗಿ ನಿರೂಪಿಸಿ, ದೇಶದ ಸಾರ್ವಜನಿಕ ಉದ್ದಿಮೆಗಳನ್ನೇ ನಾಶಗೊಳಿಸಿ ಕೋಟ್ಯಾಂತರ ಸಂಖ್ಯೆಯ ದುಡಿಯುವ ವರ್ಗದ ಬದುಕಿಗೆ ಕೊಡಲಿಪೆಟ್ಟನ್ನು ನೀಡಿದ್ದಾರೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಅಭಿಪ್ರಾಯಪಟ್ಟರು.
ಅವರು ಮೂಡಬಿದ್ರೆಯ ಸಮಾಜ ಮಂದಿರದ ಕಾಂ.ಬಿ.ಮಾಧವ ವೇದಿಕೆಯಲ್ಲಿ ಜರುಗಿದ ಸಿಐಟಿಯು 3ನೇ ಮೂಡಬಿದ್ರೆ ವಲಯ ಸಮ್ಮೇಳನವನ್ನು ಉದ್ಘಾಟಿಸಿ, ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, ದೇಶದ ಸ್ವಾತಂತ್ರ್ಯ, ಸಮಗ್ರತೆ, ಸೌಹಾರ್ದತೆಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಇಡೀ ದೇಶವನ್ನು ಒಂದಾಗಿ ನಿಲ್ಲುವಂತೆ ಮಾಡುವಲ್ಲಿ ಕಾರ್ಮಿಕ ವರ್ಗದ ಪಾತ್ರವೇ ಪ್ರಧಾನವಾಗಿದೆ. ಅಂತಹ ಕಾರ್ಮಿಕ ವರ್ಗದ ಮಧ್ಯೆ ಕೋಮುವಾದದ ವಿಷ ಬೀಜವನ್ನು ಬಿತ್ತಿ ಅನೈಕ್ಯತೆಯನ್ನು ಸೃಷ್ಠಿಸುವ ಮೂಲಕ ದೇಶವನ್ನೇ ಒಡೆಯಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಧಾರ್ಮಿಕ ಘೋಷಣೆಗಳನ್ನು ಕೂಗುವ ಮೂಲಕ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ದೇಶಪ್ರೇಮದ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಹೀಗಾಗಿ ಇಡೀ ದೇಶವೇ ಬಲಪಂಥೀಯ ಫ್ಯಾಸಿಸ್ಟ್ ವಿಚಾರಧಾರೆಯತ್ತ ವಾಲುವ ಮುಖಾಂತರ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದ ಅಂಚಿನಲ್ಲಿದೆ. ಇಂತಹ ಸಂಧರ್ಭದಲ್ಲಿ ದೇಶವನ್ನು ಉಳಿಸಲು ಇಡೀ ಕಾರ್ಮಿಕ ವರ್ಗ ಒಂದಾಗಿ ನಿಲ್ಲಬೇಕಾಗಿದೆ. ಕಾರ್ಮಿಕ ವರ್ಗದ ಸಂಕೇತವಾದ ಕೆಂಬಾವುಟವನ್ನು ಇನ್ನಿಲ್ಲವಾಗಿಸಲು ದೇಶದ ಬಂಡವಾಳ ಶಾಹಿಗಳು ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದಾರೆ. ದುಡಿಯುವ ವರ್ಗ ಎಲ್ಲಿಯವರೆಗೆ ಜೀವಂತವಾಗಿ ಇರುತ್ತೋ ಅಲ್ಲಿಯವರೆಗೆ ಕೆಂಬಾವುಟ ಸದಾ ಕಾಲ ಆಕಾಶದೆತ್ತರಕ್ಕೆ ಹಾರಾಡುತ್ತಿರುತ್ತದೆ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಸಿಐಟಿಯು ದ.ಕ.ಜಿಲ್ಲಾ ಕಾರ್ಯದರ್ಶಿ ರಾಧಾ ಮೂಡಬಿದ್ರೆ ಈ ಸಂದರ್ಭ ಮಾತನಾಡಿದರು.
ಪ್ರಾರಂಭದಲ್ಲಿ ಸಿಐಟಿಯು ದ.ಕ.ಜಿಲ್ಲಾ ಕಾರ್ಯದರ್ಶಿ ರಾಧಾ ಮೂಡಬಿದ್ರೆ, ಹಿರಿಯ ಮುಖಂಡರಾದ ಸುಂದರ ಶೆಟ್ಟಿಯವರು ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನುಸಿಐಟಿಯು ಮೂಡಬಿದ್ರೆ ವಲಯ ಅಧ್ಯಕ್ಷ ರಮಣಿ ಮೂಡಬಿದ್ರೆ ವಹಿಸಿದ್ದರು. ವೇದಿಕೆಯಲ್ಲಿ ಸಿಐಟಿಯು ಮೂಡಬಿದ್ರೆ ವಲಯದ ಮುಖಂಡರಾದ ಶಂಕರ ವಾಲ್ಪಾಡಿ, ಗಿರಿಜಾ,ಲಕ್ಷ್ಮೀ, ಮಹಮ್ಮದ್ ತಸ್ರೀಫ್, ವಿಶ್ವನಾಥ ಮುಂತಾದವರು ಉಪಸ್ಥಿತರಿದ್ದರು.
ಬಳಿಕ ನಡೆದ ಪ್ರತಿನಿಧಿ ಅಧಿವೇಶನದಲ್ಲಿ ಹಲವಾರು ಸಂಘಟನಾತ್ಮಕ ವಿಷಯಗಳ ಬಗ್ಗೆ ಚರ್ಚಿಸಿ, ಮುಂದಿನ 3 ವರ್ಷಗಳ ಅವಧಿಗೆ ನೂತನ ಸಮಿತಿಯನ್ನು ಸಮ್ಮೇಳನವು ಆಯ್ಕೆಗೊಳಿಸಿತು. ನೂತನ ಅಧ್ಯಕ್ಷರಾಗಿ ರಮಣಿ ಮೂಡಬಿದ್ರೆ, ಪ್ರಧಾನ ಕಾರ್ಯದರ್ಶಿಯಾಗಿ ರಾಧಾ ಮೂಡಬಿದ್ರೆ, ಖಜಾಂಚಿಯಾಗಿ ಮಹಮ್ಮದ್ ತಸ್ರೀಫ್ ಸರ್ವಾನುಮತದಿಂದ ಆಯ್ಕೆಗೊಂಡರು.








