ಶಿವಮೊಗ್ಗ: ಗುಂಪುಗಳ ನಡುವೆ ಮಾತಿನ ಚಕಮಕಿ, ಬಿಗಿ ಪೊಲೀಸ್ ಭದ್ರತೆ

ಶಿವಮೊಗ್ಗ, ಜು. 28: ಬೈಕ್‍ನ ಸೈಲೈನ್ಸರ್ ಶಬ್ದದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ನಗರದ ಸೀಗೆಹಟ್ಟಿಯ ಅಂತರ ಘಟ್ಟಮ್ಮ ವೃತ್ತದ ಬಳಿ ರವಿವಾರ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳದಲ್ಲಿ ನೆರೆದಿದ್ದವರನ್ನು ಚದುರಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ.
ಘಟನೆ ಹಿನ್ನೆಲೆ: ಬೈಕ್‍ನ ಕರ್ಕಶ ಶಬ್ದದದ ಕುರಿತಂತೆ ಕೆಲ ಸಾರ್ವಜನಿಕರು ಬೈಕ್ ಸವಾರನೋರ್ವನಿಗೆ ಬುದ್ದಿ ಹೇಳಿದ್ದಾರೆ. ಇದೇ ವೇಳೆ ಮತ್ತೋರ್ವ ಸವಾರ ಕೂಡ ಕರ್ಕಶ ಶಬ್ದ ಮಾಡಿಕೊಂಡು ಬಂದಿದ್ದಾನೆ ಎನ್ನಲಾಗಿದೆ.
ಈ ವೇಳೆ ಎರಡು ಗುಂಪುಗಳ ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾವಣೆ ಹಂತಕ್ಕೆ ಪರಿಸ್ಥಿತಿ ತಲುಪಿದೆ. ಇದೇ ವೇಳೆ ಕೆಲವರು ಕಲ್ಲು ತೂರಾಟಕ್ಕೂ ಮುಂದಾಗಿದ್ದು, ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿದೆ.
ತಕ್ಷಣವೇ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು.
ಎಸ್ಪಿ ಡಾ. ಎಂ. ಅಶ್ವಿನಿಯವರು ಸುದ್ದಿಗಾರರೊಂದಿಗೆ ಮಾತನಾಡಿ, ಸೀಗೆಹಟ್ಟಿಯಲ್ಲಿ ಸಿ.ಸಿ. ಕ್ಯಾಮರ ಅಳವಡಿಕೆ ಮಾಡಲಾಗುವುದು. ಮೊಹಲ್ಲಾ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಲಾಗುವುದು ಎಂದು ತಿಳಿಸಿದ್ದಾರೆ.








