ಪರ್ಶಿಯನ್ ಕೊಲ್ಲಿಯಲ್ಲಿ ಟ್ಯಾಂಕರ್‌ಗಳಿಗೆ ಯುರೋಪ್ ನೌಕಾಪಡೆ ಬೆಂಗಾವಲು
ಬ್ರಿಟನ್ ಪ್ರಸ್ತಾಪಕ್ಕೆ ಇರಾನ್ ಆಕ್ರೋಶ
ಟೆಹ್ರಾನ್,ಜು.28: ಗಲ್ಫ್ ಪ್ರದೇಶದ ಸಾಗರಪ್ರದೇಶಗಳಲ್ಲಿ ಸಂಚರಿಸುವ ಟ್ಯಾಂಕರ್ ಹಡಗುಗಳಿಗೆ ಯುರೋಪ್ ನೇತೃತ್ವದ ನೌಕಾಪಡೆಯ ಬೆಂಗಾವಲು ಒದಗಿಸುವ ಬ್ರಿಟನ್ ಪ್ರಸ್ತಾಪವು ಪ್ರಚೋದನಕಾರಿಯೆಂದು ಇರಾನ್ ರವಿವಾರ ಆಕ್ರೋಶ ವ್ಯಕ್ತಪಡಿಸಿದೆ.
‘‘ಪರ್ಶಿಯನ್ ಕೊಲ್ಲಿಗೆ ಯುರೋಪ್‌ನ ನೌಕಾದಳವನ್ನು ಕಳುಹಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆಂಬುದನ್ನು ನಾವು ಕೇಳಿದ್ದೇವೆ. ಇದು ಸಹಜವಾಗಿ ದ್ವೇಷದ ಸಂದೇಶವನ್ನು ನೀಡುತ್ತದೆ ಹಾಗೂ ಪ್ರಚೋದನಕಾರಿಯಾಗಿದೆ ಮತ್ತು ಉದ್ವಿಗ್ನತೆ ಹೆಚ್ಚಾಗಲು ಕಾರಣವಾಗಲಿದೆ ಎಂದು ಸರಕಾರಿ ವಕ್ತಾರ ಅಲಿ ರಬೇಯಿ ತಿಳಿಸಿದ್ದಾರೆ.
ಜುಲೈ 19ರಂದು ಬ್ರಿಟನ್ ಧ್ವಜವಿರುವ ಟ್ಯಾಂಕರ್ ನೌಕೆಯನ್ನು ಇರಾನ್ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಶ್ವದ ಅತ್ಯಂತ ತೈಲಹಡಗು ಸಂಚಾರ ದಟ್ಟಣೆಯ ಮಾರ್ಗವಾದ ಪರ್ಶಿಯನ್ ಕೊಲ್ಲಿ ಪ್ರದೇಶದಲ್ಲಿ ಸಂಚರಿಸುವ ಟ್ಯಾಂರ್ ಹಡಗುಗಳಿಗೆ
ಬೆಂಗಾವಲಾಗಿ ಯುರೋಪ್ ನೇತೃತ್ವದ ನೌಕಾಪಡೆಯನ್ನು ಕಳುಹಿಸಲು ತಾನು ಯೋಚಿಸುತ್ತಿರುವುದಾಗಿ ಬ್ರಿಟನ್ ರವಿವಾರ ತಿಳಿಸಿತ್ತು.
ಯುರೋಪ್ ಒಕ್ಕೂಟದ ನಿರ್ಬಂಧಗಳನ್ನು ಉಲ್ಲಂಘಿಸಿದೆಯೆದು ಆರೋಪಿಸಿ ಸಿರಿಯಗೆ ಸೇರಿ ಜಿಬ್ರಾಲ್ಟರ್ ಜಲಸಂಧಿಯಲ್ಲಿ ಇರಾನ್‌ನ ತೈಲ ಟ್ಯಾಂಕರ್ ಹಡಗು ಗ್ರೇಸ್-1 ಅನ್ನು ಮುಟ್ಟುಗೋಲು ಹಾಕಿದ ಎರಡು ವಾರಗಳ ಬಳಿಕ ಬ್ರಿಟನ್‌ನ ಸ್ಟೆನಾ ಇಂಪೆರೊ ನೌಕೆಯನ್ನು ಇರಾನ್ ವಶಪಡಿಸಿಕೊಂಡಿತ್ತು.
ತೈಲ ಸಮೃದ್ಧ ಕೊಲ್ಲಿ ಪ್ರದೇಶದ ಭದ್ರತೆಯನ್ನು ಆ ಪ್ರದೇಶದ ದೇಶಗಳೇ ನೋಡಿಕೊಳ್ಳಬೇಕೆಂದು ಇರಾನ್ ಭಾವಿಸುತ್ತಿದೆ ಎಂದು ಟೆಹ್ರಾನ್‌ನ ವಕ್ತಾರರೊಬ್ಬರು ತಿಳಿಸಿದ್ದಾರೆ.