ಮರ ಬಿದ್ದು ಕೂಲಿ ಕಾರ್ಮಿಕ ಮೃತ್ಯು

ಬೆಂಗಳೂರು, ಜು.28: ಸೆಂಟ್ರಿಂಗ್ ಕುಸಿದು ಮರ ತುಂಡಾಗಿ ಬಿದ್ದ ಪರಿಣಾಮ ಕೂಲಿ ಕಾರ್ಮಿಕನೊರ್ವ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಸ್ಸಾಂ ಮೂಲದ ಮುಲ್ಲಾ(25) ಎಂಬಾತ ಮೃತ ಕಾರ್ಮಿಕ ಎಂದು ಪೊಲೀಸರು ಗುರುತಿಸಿದ್ದಾರೆ. ಘಟನೆಯಲ್ಲಿ ಅಬ್ದುಲ್ ಝಾಕೀರ್(26) ಗಾಯಗೊಂಡಿದ್ದು, ಆಸಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಲೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ನ ಆವರಣದಲ್ಲಿ 5 ಮಹಡಿಗಳ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಕೊನೆಯ ಹಂತವಾಗಿ ಹೊರಭಾಗದಲ್ಲಿ ಫ್ಯಾಬ್ರಿಕೇಷನ್ ಕೆಲಸವನ್ನು ಮುನಿಸ್ವಾಮಿ ಎಂಬಾತ ಗುತ್ತಿಗೆ ಪಡೆದಿದ್ದ. ಅದರಂತೆ ಅಸ್ಸಾಂ ಮೂಲದ ಕೂಲಿ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುತ್ತಿದ್ದು, ಶನಿವಾರ ಸಂಜೆ ನಾಲ್ಕನೆ ಮಹಡಿಯ ಹೊರಭಾಗದಲ್ಲಿ ಸೆಂಟ್ರಿಂಗ್ ಮರ ಕಟ್ಟಿಕೊಂಡು ಮುಲ್ಲಾ ಹಾಗೂ ಅಬ್ದುಲ್ ಝಾಕೀರ್, ಅದರ ಮೇಲೆ ನಿಂತು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಮರ ತುಂಡಾಗಿ ಇಬ್ಬರೂ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮುಲ್ಲಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಗುತ್ತಿಗೆದಾರರನನ್ನು ವಶಕ್ಕೆ ಪಡೆದಿರುವ ಬಾಗಲೂರು ಠಾಣಾ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.