ಸಿಎಂ ಯಡಿಯೂರಪ್ಪರಿಗೆ ಬಿಬಿಎಂಪಿ ಅಭಿನಂದನೆ
ಬೆಂಗಳೂರು, ಜು.29: ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೆ ಪಾಲಿಕೆ ಸಭೆ ಅಭಿನಂದನೆ ಸಲ್ಲಿಸಿತು.
ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಅವರು ಸಿದ್ದರಾಮಯ್ಯ, ಎಚ್.ಡಿಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಬಿಎಂಪಿಗೆ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿದ್ದರು. ಬಿ.ಎಸ್. ಯಡಿಯೂರಪ್ಪನವರು 10 ಸಾವಿರ ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಶಾಸಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಸಂಸತ್ ಸದಸ್ಯರು ಹಾಗೂ ಶಾಸಕರು, ಪಾಲಿಕೆ ಸದಸ್ಯರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನಗರಕ್ಕೆ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಕೇಂದ್ರ ಸರಕಾರದಿಂದ ಬಿಬಿಎಂಪಿಗೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡಿಸುವ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ಜೈಪಾಲ್ ರೆಡ್ಡಿಗೆ ಶ್ರದ್ಧಾಂಜಲಿ: ಇತ್ತೀಚೆಗೆ ನಿಧನರಾದ ಕೇಂದ್ರ ಮಾಜಿ ಸಚಿವ ಜೈಪಾಲ್ ಅವರ ನಿಧನಕ್ಕೆ ಪಾಲಿಕೆ ಸಭೆ ಶ್ರದ್ಧಾಂಜಲಿ ಸಲ್ಲಿಸಿತು. ಮೃತರ ನಿಧನಕ್ಕೆ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಿದರು.