ಬ್ರಿಟನ್ ಟ್ಯಾಂಕರ್ ವಶಪಡಿಸಿಕೊಂಡಿರುವುದು ಪರಮಾಣು ಒಪ್ಪಂದದ ಉಲ್ಲಂಘನೆ: ಇರಾನ್
ವಿಯೆನ್ನಾ (ಆಸ್ಟ್ರಿಯ), ಜು. 29: ತನ್ನ ತೈಲ ಟ್ಯಾಂಕರನ್ನು ಬ್ರಿಟನ್ ವಶಪಡಿಸಿಕೊಂಡಿರುವುದು 2015ರ ಪರಮಾಣು ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಇರಾನ್ ರವಿವಾರ ಹೇಳಿದೆ.
ಜಗತ್ತಿನ ಪ್ರಬಲ ದೇಶಗಳೊಂದಿಗೆ ಇರಾನ್ ಮಾಡಿಕೊಂಡ ಪರಮಾಣು ಒಪ್ಪಂದವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಪ್ಪಂದದ ಉಳಿದ ದೇಶಗಳು ಆಸ್ಟ್ರಿಯ ರಾಜಧಾನಿ ವಿಯೆನ್ನಾದಲ್ಲಿ ಸಭೆ ಸೇರಿರುವ ಹಿನ್ನೆಲೆಯಲ್ಲಿ ಇರಾನ್ ಈ ಹೇಳಿಕೆ ನೀಡಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಅಮೆರಿಕ ಒಪ್ಪಂದದಿಂದ ಹಿಂದೆ ಸರಿದಿದೆ.
ಬ್ರಿಟನ್ ಆಡಳಿತಕ್ಕೆ ಒಳಪಟ್ಟ ಜಿಬ್ರಾಲ್ಟರ್ನ ಕರಾವಳಿಯಲ್ಲಿ ಇರಾನ್ನ ತೈಲ ಟ್ಯಾಂಕರನ್ನು ಬ್ರಿಟಿಶ್ ನೌಕಾಪಡೆಯು ಈ ತಿಂಗಳ ಆರಂಭದಲ್ಲಿ ವಶಪಡಿಸಿಕೊಂಡಿತ್ತು. ಸಿರಿಯದ ಮೇಲೆ ಐರೋಪ್ಯ ಒಕ್ಕೂಟ ವಿಧಿಸಿರುವ ಆರ್ಥಿಕ ದಿಗ್ಬಂಧನಗಳನ್ನು ಈ ತೈಲ ಟ್ಯಾಂಕರ್ ಉಲ್ಲಂಘಿಸಿದ ಆರೋಪದಲ್ಲಿ ಅದನ್ನು ವಶಪಡಿಸಿಕೊಳ್ಳಲಾಗಿತ್ತು.
ಇದಕ್ಕೆ ಪ್ರತಿಯಾಗಿ ಜುಲೈ 19ರಂದು ಹೋರ್ಮುಝ್ ಜಲಸಂಧಿಯಲ್ಲಿ ಬ್ರಿಟಿಶ್ ಧ್ವಜವನ್ನು ಹೊಂದಿರುವ ತೈಲ ಟ್ಯಾಂಕರೊಂದನ್ನು ಇರಾನ್ನ ರೆವಲೂಶನರಿ ಗಾರ್ಡ್ಸ್ ಸೈನಿಕರು ವಶಪಡಿಸಿಕೊಂಡಿದ್ದರು.
‘‘ಪರಮಾಣು ಒಪ್ಪಂದದ ಅನುಸಾರ ಇರಾನ್ ತನ್ನ ತೈಲವನ್ನು ರಫ್ತು ಮಾಡಬಹುದಾದುದರಿಂದ, ಇರಾನ್ನ ತೈಲ ರಫ್ತಿನ ದಾರಿಯಲ್ಲಿ ಎದುರಾಗುವ ಯಾವುದೇ ತಡೆಯು ಪರಮಾಣು ಒಪ್ಪಂದಕ್ಕೆ ವಿರುದ್ಧವಾಗಿದೆ’’ ಎಂದು ವಿಯೆನ್ನಾದಲ್ಲಿ ಸಭೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇರಾನ್ ಉಪ ವಿದೇಶ ಸಚಿವ ಅಬ್ಬಾಸ್ ಅರಗ್ಚಿ ಹೇಳಿದರು.
►ತೈಲ ಟ್ಯಾಂಕರ್ಗಳ ವಿನಿಮಯ ಸಾಧ್ಯವಿಲ್ಲ: ಬ್ರಿಟನ್
ಇರಾನ್ ವಶಪಡಿಸಿಕೊಂಡಿರುವ ಬ್ರಿಟನ್ನ ತೈಲ ಟ್ಯಾಂಕರ್ ಬಿಡುಗಡೆಗೆ ಪ್ರತಿಯಾಗಿ, ತಾನು ವಶಪಡಿಸಿಕೊಂಡಿರುವ ಇರಾನ್ ತೈಲ ಟ್ಯಾಂಕರನ್ನು ಬಿಡುಗಡೆ ಮಾಡುವ ಪ್ರಸ್ತಾವವನ್ನು ಬ್ರಿಟನ್ ಸೋಮವಾರ ತಿರಸ್ಕರಿಸಿದೆ.
‘‘ವಿನಿಮಯ ಪ್ರಸ್ತಾವ ನಮ್ಮ ಮುಂದೆ ಇಲ್ಲ’’ ಎಂದು ಬ್ರಿಟನ್ ವಿದೇಶ ಕಾರ್ಯದರ್ಶಿ ಡೋಮಿನಿಕ್ ರಾಬ್ ಬಿಬಿಸಿ ರೇಡಿಯೊಗೆ ಹೇಳಿದರು.
‘‘ಇದು ಕೊಡುಕೊಳ್ಳುವ ವ್ಯವಹಾರವಲ್ಲ. ಇದು ಅಂತರ್ರಾಷ್ಟ್ರೀಯ ಕಾನೂನು ಮತ್ತು ಅಂತರ್ರಾಷ್ಟ್ರೀಯ ಕಾನೂನು ವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದೆ. ಅದನ್ನು ಎತ್ತಿಹಿಡಿಯಬೇಕಾಗಿದೆ. ಅದನ್ನೇ ನಾವು ಪ್ರತಿಪಾದಿಸುತ್ತಿದ್ದೇವೆ’’ ಎಂದರು.