ವಿಂಡೀಸ್‌ನಲ್ಲಿ ಸರಣಿ ಗೆಲ್ಲುವುದೇ ನಮ್ಮ ಗುರಿ
ತಂಡದಲ್ಲಿ ಒಡಕಿಲ್ಲ, ರೋಹಿತ್ ಜೊತೆ ಮನಸ್ತಾಪವಿಲ್ಲ

ಮುಂಬೈ, ಜು.29: ವೆಸ್ಟ್‌ಇಂಡೀಸ್‌ನಲ್ಲಿ ಸರಣಿ ಗೆಲ್ಲುವುದು ಟೀಮ್ ಇಂಡಿಯಾದ ಪ್ರಮುಖ ಗುರಿಯಾಗಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಳ್ಳುವ ಮೊದಲು ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು ತಂಡದಲ್ಲಿ ಒಡಕಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ. ಉಪನಾಯಕ ರೋಹಿತ್ ಶರ್ಮಾ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ತಮ್ಮ ನಡುವಿನ ಸಂಬಂಧ ಚೆನ್ನಾಗಿದೆ. ಮೈದಾನದಲ್ಲಿ ಎಲ್ಲರೂ ಸಂಘಟಿತರಾಗಿ ಹೋರಾಡುತ್ತಾರೆ ಎಂದು ಹೇಳಿದರು.
‘‘ತಂಡದ ಸಂಬಂಧ ಚೆನ್ನಾಗಿಲ್ಲ ಎಂಬ ಮಾತನ್ನು ಹಲವು ಬಾರಿ ಕೇಳಿದ್ದೇನೆ. ಒಂದು ವೇಳೆ ಅಂತಹ ವಾತಾವರಣ ತಂಡದಲ್ಲಿದ್ದರೆ ಕಳೆದ ಎರಡು -ಮೂರು ವರ್ಷಗಳಿಂದ ಏನನ್ನು ಮಾಡಲು ಸಾಧ್ಯವಾಗುರಲಿಲ್ಲ. ಭಾರತ ಟೆಸ್ಟ್‌ನಲ್ಲಿ ನಂ.7ರಿಂದ ನಂ.1 ಸ್ಥಾನಕ್ಕೇರಿದೆ. ಏಕದಿನ ಕ್ರಿಕೆಟ್‌ನಲ್ಲೂ ನಮ್ಮ ಸಾಧನೆ ಕಡಿಮೆ ಇಲ್ಲ’’ ಎಂದು ಹೇಳಿದರು.
ರೋಹಿತ್ ಶರ್ಮಾ ಜೊತೆ ಸಂಬಂಧ ಚೆನ್ನಾಗಿಲ್ಲ ಎಂಬ ಮಾತುಗಳು ಕೇಳಿ ಬಂದ ಬಳಿಕ ನಿಮಗೆ ಅವರನ್ನು ಭೇಟಿಯಾಗಲು ಸಮಸ್ಯೆ ಆಗಿತ್ತೇ? ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ ನಮ್ಮ ಒಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಾರು ಈ ರೀತಿ ವದಂತಿಯನ್ನು ಹುಟ್ಟು ಹಾಕುತ್ತಾರೋ ಮತ್ತು ಇದರಿಂದ ಪ್ರಯೋಜನ ಪಡೆಯಲು ಯಾರು ಯತ್ನಿಸುತ್ತಿದ್ದಾರೋ ಗೊತ್ತಿಲ್ಲ. ನಾವು ಟೀಮ್ ಇಂಡಿಯಾವನ್ನು ಅಗ್ರಸ್ಥಾನದಲ್ಲಿರಲು ಬಯಸುತ್ತೇವೆ. ಆದರೆ ಕೆಲವು ವ್ಯಕ್ತಿಗಳು ತಂಡವನ್ನು ಕೆಳಕ್ಕಿಳಿಸಲು ಬಯಿಸಿದ್ದಾರೆ ಎಂದರು.
► ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಮುಂದುವರಿಕೆ:
ಭಾರತ ಸೆಮಿಫೈನಲ್‌ನಲ್ಲಿ ಸೋತು ನಿರ್ಗಮಿಸಿದ ಹಿನ್ನೆಲೆಯಲ್ಲಿ ಕೋಚ್ ರವಿ ಶಾಸ್ತ್ರಿ ವಿರುದ್ಧ ಕ್ರಿಕೆಟ್ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಆದರೆ ರವಿ ಶಾಸ್ತ್ರಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಮುಂದುವರಿಯುವುದನ್ನು ನಾನು ಬಯಸಿರುವೆ ಎಂದು ಕೊಹ್ಲಿ ಹೇಳಿದ್ದಾರೆ. ರವಿ ಶಾಸ್ತ್ರಿ , ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರಿಗೆ ತಮ್ಮ ಹುದ್ದೆಗಳಲ್ಲಿ ಇನ್ನು 45 ದಿನಗಳ ಮುಂದುವರಿಯಲು ಅವಕಾಶ ನೀಡಲಾಗಿದೆ.
ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಕೋಚ್ ಆಯ್ಕೆ ಸಂಬಂಧ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕೊಹ್ಲಿ ಹೇಳಿದರು.
► ಕೊಹ್ಲಿ ಪತ್ರಿಕಾಗೋಷ್ಠಿ ಅರ್ಧಗಂಟೆ ತಂಡವಾಗಿ ಆರಂಭ:
ವಿಂಡೀಸ್ ಪ್ರವಾಸ ಸರಣಿಗೆ ಹೊರಡುವ ಮುನ್ನ ನಿಗದಿಯಾಗಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿ ಅರ್ಧಗಂಟೆ ತಡವಾಗಿ ಆರಂಭವಾಗಿತ್ತು. ಸಂಜೆ 6 ಗಂಟೆಗೆ ನಿಗದಿಯಾಗಿದ್ದ ಪತ್ರಿಕಾಗೋಷ್ಠಿ 6:30ಕ್ಕೆ ಆರಂಭಗೊಂಡಿತು.
ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಗೆ ಆಗಮಿಸುತ್ತಿದ್ದಂತೆ ಭಾರೀ ಮಳೆಯಿಂದಾಗಿ ಬರುವುದಕ್ಕೆ ಸ್ವಲ್ಪ ತಡವಾಯಿತು ಎಂದು ತಮ್ಮನ್ನು ಕಾಯುತ್ತಿದ್ದ ಸುದ್ದಿಗಾರರಲ್ಲಿ ಕೊಹ್ಲಿ ಕ್ಷಮೆ ಯಾಚಿಸಿದರು. ಕೊಹ್ಲಿ ತಂಡದ ಮಧ್ಯಮ ಸರದಿಯ ಬ್ಯಾಟಿಂಗ್‌ನ ಬಗ್ಗೆ ಮಾತನಾಡಿದರು. ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಟೆಸ್ಟ್ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.
ಭಾರತ ತಂಡದ ವೆಸ್ಟ್‌ಇಂಡೀಸ್ ಪ್ರವಾಸ ಸರಣಿ ಆಗಸ್ಟ್3ರಿಂದ ಸೆ. 3ರ ತನಕ ನಡೆಯಲಿದೆ.
ಭಾರತ ಪ್ರವಾಸದಲ್ಲಿ 3 ಟ್ವೆಂಟಿ-20, 3 ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.







