ಧೋನಿಯ ದೇಶಪ್ರೇಮಕ್ಕೆ ವಿಂಡೀಸ್‌ನ ಕೊಟ್ರೆಲ್ ಶ್ಲಾಘನೆ

ಹೊಸದಿಲ್ಲಿ, ಜು.29: ಭಾರತೀಯ ಸೇನೆಯ ಮೇಲೆ ಹಿರಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ತೋರುತ್ತಿರುವ ಸಮರ್ಪಣಾ ಭಾವ ಹಾಗೂ ಪ್ರೀತಿಗೆ ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಶೆಲ್ಡನ್ ಕೊಟ್ರೆಲ್ ಶ್ಲಾಘಿಸಿದ್ದಾರೆ.
ಮೈದಾನದ ಹೊರಗೆ ಹಾಗೂ ಒಳಗೆ ಧೋನಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಜಮೈಕಾದ ರಕ್ಷಣಾ ಪಡೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿರುವ ಕೊಟ್ರೆಲ್ ಟ್ವೀಟ್ ಮಾಡಿದ್ದಾರೆ.
‘‘ಈ ವ್ಯಕ್ತಿ ಕ್ರಿಕೆಟ್ ಮೈದಾನದಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಇವರಲ್ಲಿ ಅಗಾಧ ದೇಶಭಕ್ತಿಯಿದೆ ಹಾಗೂ ತನ್ನ ಕರ್ತವ್ಯವನ್ನು ಮೀರಿ ಹೆಚ್ಚಿನದನ್ನು ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ. ನಾನು ನನ್ನ ಮಕ್ಕಳೊಂದಿಗೆ ಜಮೈಕಾದ ಮನೆಯಲ್ಲಿದ್ದೇನೆ.ಹೀಗಾಗಿ ಇದನ್ನು ಗಮನಿಸಲು ನನಗೆ ಸಮಯ ಲಭಿಸಿತ್ತು’’ ಎಂದು ಕೊಟ್ರೆಲ್ ಟ್ವೀಟ್ ಮಾಡಿದ್ದಾರೆ. ಧೋನಿ ಸೇನೆಯ ಸಮವಸ್ತ್ರ ಧರಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರಿಂದ ಪದ್ಮ ಭೂಷಣ ಪ್ರಶಸ್ತಿ ಪಡೆಯುತ್ತಿರುವ ವಿಡಿಯೋವನ್ನು ವೆಸ್ಟಇಂಡೀಸ್‌ನ ವೇಗದ ಬೌಲರ್ ತನ್ನ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೆ ಶೇರ್ ಮಾಡಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್‌ನಲ್ಲಿ ವಿಕೆಟ್ ಪಡೆದ ಬಳಿಕ ತನ್ನ ಟ್ರೇಡ್‌ಮಾರ್ಕ್ ‘ಸೆಲ್ಯೂಟ್’ನ ಮೂಲಕ ಸಂಭ್ರಮಾಚರಿಸುವುದರೊಂದಿಗೆ ಶೆಲ್ಡನ್ ಖ್ಯಾತಿ ಪಡೆದಿದ್ದರು.
ಧೋನಿ ಪ್ಯಾರಾಚ್ಯೂಟ್ ರೆಜಿಮೆಂಟ್‌ನಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿದ್ದು, 2015ರಲ್ಲಿ ಆಗ್ರಾದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಭಾರತೀಯ ಸೇನಾ ವಿಮಾನದಿಂದ ಐದು ಬಾರಿ ಪ್ಯಾರಾಚ್ಯೂಟ್ ತರಬೇತಿ ಜಿಗಿತವನ್ನು ಪೂರೈಸಿದ್ದರು.
ರಾಂಚಿಯ ಧೋನಿ ಮುಂಬರುವ ವೆಸ್ಟ್‌ಇಂಡೀಸ್ ಕ್ರಿಕೆಟ್ ಪ್ರವಾಸದಿಂದ ಹೊರಗುಳಿದಿದ್ದು, ಕಾಶ್ಮೀರದಲ್ಲಿ ಭಾರತೀಯ ಸೇನೆಯೊಂದಿಗೆ ಕರ್ತವ್ಯದಲ್ಲಿ ತೊಡಲಿದ್ದಾರೆ. 15 ದಿನಗಳ ಕಾಲ ಗಸ್ತು, ಕಾವಲು ಹಾಗೂ ಪೋಸ್ಟ್ ಡ್ಯೂಟಿ ನಿಭಾಯಿಸಲಿದ್ದಾರೆ.







