ಸಮ್ಮಿಶ್ರ ಸರಕಾರ ಜನಪರ ಆಡಳಿತ ನೀಡಿದೆ: ಜೆಡಿಎಸ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್

ಚಿಕ್ಕಮಗಳೂರು, ಜು.29: ರಾಜ್ಯದಲ್ಲಿ ಅಸ್ತಿತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ಜನಪರ, ರೈತಪರ ಕಾರ್ಯಕ್ರಮಗಳ ಮೂಲಕ ಉತ್ತಮ ಪಾರದರ್ಶಕ ಆಡಳಿತ ನೀಡಿದೆ. ಇಂತಹ ಜನಪರ ಸರಕಾರ ಬಿಜೆಪಿಯವರ ಅಧಿಕಾರದ ದುರಾಸೆಗೆ ಬಲಿಯಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಸೋಮವಾರ ಕರೆಯಲಾಗಿದ್ದ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 14 ತಿಂಗಳು ಆಡಳಿತ ನಡೆಸಿದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಜನಪರ, ರೈತಪರನಾದ ಸರಕಾರವಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಮತದಾರರಿಗೆ ಕೊಟ್ಟ ವಾಗ್ಧಾನದಂತೆ ರಾಜ್ಯದ ರೈತರ 48 ಸಾವಿರ ಕೋಟಿ ರೂ. ಸಾಲವನ್ನು ಮಾನ್ನಾ ಮಾಡಿದ್ದಾರೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭತ್ತದ ಕೃಷಿಕರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತೀ ಹೆಕ್ಟೇರ್ ಗೆ 10 ಸಾವಿರದಂತೆ ಪ್ರೋತ್ಸಾಹಧನ ಘೋಷಣೆ ಮಾಡುವ ಮೂಲಕ ಭತ್ತದ ಕೃಷಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದರು.
ರಾಜ್ಯದ ಪೊಲೀಸ್ ಇಲಾಖೆಯನ್ನು ಬಲ ಪಡಿಸುವ ನಿಟ್ಟಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಔರಾದ್ಕಾರ್ ವರದಿಯನ್ನು ಜಾರಿಗೊಳಿಸಿದ್ದಾರೆ. ಇದರಿಂದಾಗಿ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಹಂತದ ಅಧಿಕಾರಿಗಳ ವೇತನವನ್ನು ದ್ವಿಗುಣಗೊಳಿಸಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ ಎಂದ ಅವರು, ಖಾಸಗಿ ಲೇವಾದೇವಿಯವರಿಂದ ಕೈಸಾಲ ಪಡೆದು ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಬಡಜನರ ಹಿತರಕ್ಷಣೆಯ ಉದ್ದೇಶದಿಂದ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು, ಜು.16ರಂದು ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆದು ಕರ್ನಾಟಕ ಋಣಪರಿಹಾರ ಕಾಯ್ದೆಯನ್ನು ಜಾರಿ ಮಾಡಿದ್ದಾರೆ. ಈ ಕಾಯ್ದೆಯಿಂದಾಗಿ ರಾಜ್ಯ ಕೋಟ್ಯಾಂತರ ಜನರ ನೆಮ್ಮದಿ ಬದುಕಿಗೆ ಕಾರಣಕರ್ತರಾಗಿದ್ದಾರೆ ಎಂದು ರಂಜನ್ ಅಜಿತ್ ಕುಮಾರ್ ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ನೇತೃತ್ವ ಸಮ್ಮಿಶ್ರ ಸರಕಾರ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ನೆರವು ನೀಡಿದ್ದಾರೆ. ಎರಡು ದಶಕಗಳ ಬೇಡಿಕೆಯಾಗಿದ್ದ ಕಳಸ ತಾಲೂಕು ರಚನೆಗೆ ಈ ಹಿಂದಿನ ಬಿಜೆಪಿ ಸರಕಾರ ನಿರ್ಲಕ್ಷ್ಯ ವಹಿಸಿತ್ತು. ಆದರೆ ಕುಮಾರಸ್ವಾಮಿ ಅವರು ಜಿಲ್ಲಾ ಕೇಂದ್ರದಿಂದ 150 ಕಿಮೀ ದೂರದಲ್ಲಿರುವ ಕಳಸ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಳಸ ತಾಲೂಕು ಘೋಷಣೆ ಮಾಡಿ ಜನರ ಬೇಡಿಕೆ ಈಡೇರಿಸಿದ್ದಾರೆ. ಇನಾಂ ಭೂಮಿ ಸಮಸ್ಯೆಯಿಂದ ನಲುಗಿದ್ದ ಕಳಸ ಭಾಗದ ರೈತರ ನೆರವಿಗೆ ನಿಂತಿದ್ದಾರೆ ಎಂದ ಅವರು, ಒತ್ತುವರಿ ಸರಕಾರಿ ಜಮೀನನ್ನು ಲೀಸ್ಗೆ ನೀಡುವ ಸಿದ್ದರಾಮಯ್ಯ ಸರಕಾರದ ಯೋಜನೆಗೆ ಕಾಯಕಲ್ಪ ನೀಡುವ ಮೂಲಕ ಕಾಫಿಬೆಳೆಗಾರರ ನೆರವಿಗೆ ಧಾವಿಸಿದ್ದಾರೆಂದರು.
ಜಿಲ್ಲಾ ಕೇಂದ್ರದ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 50 ಕೋ. ರೂ. ಅನುದಾನ ನೀಡಿದ್ದಲ್ಲದೇ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 150 ಕೋಟಿ. ರೂ. ಅನುದಾನ ಹಾಗೂ ಕರಗಡ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು 10 ಕೋ. ರೂ. ಅನುದಾನ ನೀಡಿದ್ದಾರೆ. ಅಲ್ಲದೇ ನಗರದಲ್ಲಿದ್ದ ಹಳೆಯ ಪ್ರವಾಸಿ ಮಂದಿರದ ಅಭಿವೃದ್ಧಿಗೆ 10 ಕೋ. ರೂ. ಅನುದಾನ ನೀಡಿದ್ದಾರೆ ಎಂದ ಅವರು, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಜನಪರ, ರೈತಪರವಾದ ಯೋಜನೆಗಳನ್ನು ಜಾರಿ ಮಾಡಿ ಜನಮಾನಸದಲ್ಲಿ ನೆಲೆಸಿದ್ದಾರೆ. ಕುಮಾರಸ್ವಾಮಿ ಅವರ ಜನಪರ ಕಾರ್ಯಗಳಿಗೆ ಕಾಂಗ್ರೆಸ್ ಮುಖಂಡರು ಉತ್ತಮ ಸಹಕಾರ ನೀಡಿದ್ದಾರೆ ಎಂದರು.
ಸಮ್ಮಿಶ್ರ ಸರಕಾರದ ಈ ಸಾಧನೆಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಲಾಗುವುದು. ಸದ್ಯ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿ ಸರಕಾರ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ವಿನಿಯೋಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಬಿಜೆಪಿ ಶಾಸಕರು ಈ ಅನುದಾನ ವಿನಿಯೋಗಿಸಲು ನಿರ್ಲಕ್ಷ್ಯಿಸಿ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿದಲ್ಲಿ ಜೆಡಿಎಸ್ ಪಕ್ಷ ಹೋರಾಟಕ್ಕಿಳಿಯಲಿದೆ ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಮುಖಂಡರಾದ ರಮೇಶ್, ಚಂದ್ರಪ್ಪ, ಜಯರಾಜ್ ಅರಸ್ ಉಪಸ್ಥಿತರಿದ್ದರು.
ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಈ ಬಾರಿ ಮಿತಿಮೀರಿದೆ. ಕಾಫಿ ಬೆಳೆಗಾರರು ಹಾಗೂ ರೈತರು ಕಾಡಾನೆಗಳ ಹಾವಳಿಯಿಂದಾಗಿ ಕೃಷಿ ಜಮೀನುಗಳಿಗೆ ಹಾನಿ ಮಡುತ್ತಿದ್ದು, ಪ್ರಾಣಭೀತಿಯಲ್ಲಿದ್ದಾರೆ. ಕಾಡಾನೆಗಳ ನಿರಂತರ ಹಾವಳಿಯಿಂದ ನಲುಗಿರುವ ರೈತರ ನೆರವಿಗೆ ಬಿಜೆಪಿ ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕು. ತಾಲೂಕು ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ತಡೆಗೆ ರೈಲ್ವೆ ಕಂಬಿಗಳ ಬೇಲಿ ನಿರ್ಮಾಣಕ್ಕೆ ರಾಜ್ಯ ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕು.
- ರಂಜನ್ ಅಜಿತ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ