ದೇಶದ ಪ್ರಥಮ ಶಾಸಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿಯವರಿಗೆ ಗೂಗಲ್ ನಿಂದ ‘ಡೂಡಲ್’ ಗೌರವ
ಪದ್ಮಭೂಷಣ ಪ್ರಶಸ್ತಿ ವಿಜೇತ ನಾಯಕಿಯ ಬಗ್ಗೆ ನಿಮಗೆಷ್ಟು ಗೊತ್ತು?

ಹೊಸದಿಲ್ಲಿ, ಜು.30: ಭಾರತದ ಪ್ರಥಮ ಮಹಿಳಾ ಶಾಸಕಿ ಹಾಗೂ ದೇಶದ ಪ್ರಥಮ ಮಹಿಳಾ ವೈದ್ಯೆಯರಲ್ಲಿ ಒಬ್ಬರಾಗಿರುವ ಡಾ. ಮುತ್ತುಲಕ್ಷ್ಮಿ ರೆಡ್ಡಿ ಅವರ 133ನೇ ಜಯಂತಿಯಂಗವಾಗಿ ‘ಗೂಗಲ್’ ಅವರಿಗೆ ‘ಡೂಡಲ್’ ಮೂಲಕ ಗೌರವ ಸಮರ್ಪಿಸಿದೆ. ಖ್ಯಾತ ಸಮಾಜ ಸೇವಕಿಯೂ, ಪದ್ಮ ಭೂಷಣ ಪ್ರಶಸ್ತಿ ವಿಜೇತೆಯೂ ಆಗಿದ್ದ ಡಾ. ಮುತ್ತುಲಕ್ಷ್ಮಿ ಹಿಂದಿನ ಮದ್ರಾಸ್ ನ ಸರಕಾರಿ ಹೆರಿಗೆ ಆಸ್ಪತ್ರೆಯ ಪ್ರಥಮ ಮಹಿಳಾ ಹೌಸ್ ಸರ್ಜನ್ ಎಂಬ ಹೆಗ್ಗಳಿಕೆಗೂ ಪಾತ್ರರಾದವರಾಗಿದ್ದಾರೆ.
ಡಾ. ರೆಡ್ಡಿ ಅವರು ಯುವತಿಯರು ಹಾಗೂ ಮಹಿಳೆಯರಿಗೆ ಮಾರ್ಗದರ್ಶನ ನೀಡುವ ಚಿತ್ರಣವಿರುವ ಡೂಡಲ್ ಅನ್ನು ಬೆಂಗಳೂರು ಮೂಲದ ಕಲಾವಿದೆ ಅರ್ಚನಾ ಶ್ರೀನಿವಾಸನ್ ರಚಿಸಿದ್ದಾರೆ.
ಡಾ ಮುತ್ತುಲಕ್ಷ್ಮಿ ರೆಡ್ಡಿ ಅವರು 1927ರಲ್ಲಿ ಮದ್ರಾಸ್ ವಿಧಾನ ಪರಿಷತ್ ಗೆ ನೇಮಕಗೊಂಡಿದ್ದರು. ಸದನದ ಮೊದಲ ಮಹಿಳಾ ಸದಸ್ಯರೆಂಬ ಹೆಗ್ಗಳಿಕೆಯ ಜತೆಗೆ ಆಕೆ ಪರಿಷತ್ತಿನ ಉಪಾಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು. ತಮಿಳುನಡಿನ ಪುದುಕೊಟ್ಟೈ ಎಂಬಲ್ಲಿ 1886ರಲ್ಲಿ ಜನಸಿದ ಆಕೆಯ ಜನ್ಮದಿನವನ್ನು `ಹಾಸ್ಪಿಟಲ್ ಡೇ' ಆಗಿ ತಮಿಳುನಾಡಿನ ಸರಕಾರಿ ಆಸ್ಪತ್ರೆಗಳಲ್ಲಿ ಆಚರಿಸಲಾಗುವುದೆಂದು ಇತ್ತೀಚೆಗೆ ಘೋಷಿಸಲಾಗಿತ್ತು.
ಲಿಂಗ ಅಸಮಾನತೆಯ ವಿರುದ್ಧವೂ ಹೋರಾಡಿದ್ದ ಡಾ. ಮುತ್ತುಲಕ್ಷ್ಮಿ ಮದ್ರಾಸ್ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಮೊದಲ ಭಾರತೀಯ ವಿದ್ಯಾರ್ಥಿನಿಯಾಗಿದ್ದರು.
ಹಲವಾರು ಚಿನ್ನದ ಪದಕಗಳು ಹಾಗೂ ಪ್ರಶಸ್ತಿಗಳೊಂದಿಗೆ 1912ರಲ್ಲಿ ವೈದ್ಯಕೀಯ ಪದವಿಯನ್ನು ಆಕೆ ಪಡೆದಿದ್ದರು. ವಿಮೆನ್ಸ್ ಇಂಡಿಯನ್ ಅಸೋಸಿಯೇಶನ್ ಸ್ಥಾಪಕಿಯೂ ಆಗಿದ್ದ ಡಾ. ಮುತ್ತುಲಕ್ಷ್ಮಿ ಮಹಾತ್ಮ ಗಾಂಧಿಯವರ ಉಪ್ಪಿನ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮದ್ರಾಸ್ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅವರು ಚೆನ್ನೈನಲ್ಲಿ ಜುಲೈ 22, 1968ರಂದು ನಿಧನರಾದರು.