ಐಎಂಎ ವಂಚನೆ ಪ್ರಕರಣ: ಬಿಬಿಎಂಪಿ ಸದಸ್ಯೆಯ ಪತಿ ಸೆರೆ
ಬೆಂಗಳೂರು, ಜು.30: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧಿಸಿದಂತೆ ಬಿಬಿಎಂಪಿ ಸದಸ್ಯೆಯೊಬ್ಬರ ಪತಿಯನ್ನು ಸಿಟ್ ತನಿಖಾಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಬಿಬಿಎಂಪಿ ಶಿವಾಜಿನಗರ ವಾರ್ಡ್ ಸದಸ್ಯೆ ಫರೀದಾ ಅವರ ಪತಿ ಇಶ್ತಿಯಾಕ್ ಅಹ್ಮದ್(50) ಬಂಧಿತ ಆರೋಪಿಯಾಗಿದ್ದು, ಈತ ರೌಡಿಶೀಟರ್ ಸಹ ಆಗಿದ್ದಾನೆ ಎಂದು ಸಿಟ್ ತನಿಖಾಧಿಕಾರಿಗಳು ತಿಳಿಸಿದ್ದಾರೆ.
2 ಕೋಟಿ ವಸೂಲಿ: ಪ್ರಕರಣ ಸಂಬಂಧ ಈಗಾಗಲೇ ಈ.ಡಿ. ವಶದಲ್ಲಿರುವ ಆರೋಪಿ ಮನ್ಸೂರ್ ಖಾನ್ ನಿಂದ, ಇಶ್ತಿಯಾಕ್ ಅಹ್ಮದ್ ಸುಮಾರು 2 ಕೋಟಿ ರೂ. ವಸೂಲಿ ಮಾಡಿದ್ದ. ಜೊತೆಗೆ, ರಕ್ಷಣೆ ನೀಡುವುದಾಗಿ ವಿಶ್ವಾಸ ನೀಡಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ರೌಡಿ ಪಟ್ಟಿಯಲ್ಲಿರುವ ಇಶ್ತಿಯಾಕ್ ಅಹ್ಮದ್ ವಿರುದ್ಧ ಕೊಲೆ, ಬೆದರಿಕೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 48ಕ್ಕೂ ಅಧಿಕ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಹಫ್ತಾ ವಸೂಲಿಯ ಪ್ರಕರಣದಲ್ಲಿ 'ಫೈಲ್ವಾನ್'
ಪೈಲ್ವಾನ್ ಎಂದೇ ಹೆಸರು ಪಡೆದಿರುವ ಆರೋಪಿ ಇಶ್ತಿಯಾಕ್ ಅಹ್ಮದ್ ಮನೆ ಮೇಲೆ, 2018ರ ನವೆಂಬರ್ 13ರಂದು ಸಿಸಿಬಿ ದಾಳಿ ನಡೆಸಿ, ಕಾರ್ಯಾಚರಣೆ ನಡೆಸಿತ್ತು.
ಹಫ್ತಾ ವಸೂಲಿ ಮಾಡಿ ಬೆದರಿಕೆ ಹಾಕುತ್ತಿದ್ದ ರೌಡಿ ಇಶ್ತಿಯಾಕ್ ಅಹಮದ್ ಅಲಿಯಾಸ್ ಫೈಲ್ವಾನ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಅಷ್ಟೇ ಅಲ್ಲದೇ, ಆ್ಯಂಬಿಡೆಂಟ್ ಕಂಪೆನಿ ವಂಚನೆ ಪ್ರಕರಣದಲ್ಲೂ ಈತನ ಹೆಸರು ಕೇಳಿ ಬಂದಿತ್ತು.