ವಚನ ವಿರೋಧಿ ಸಂಘ ಪರಿವಾರದವರೊಂದಿಗೆ ವೇದಿಕೆ ಹಂಚಿಕೊಳ್ಳಲ್ಲ: ಕೆ.ನೀಲಾ ಸ್ಪಷ್ಟನೆ
'ಉಡುಪಿಯ ಮತ್ತೆ ಕಲ್ಯಾಣ ಕಾರ್ಯಕ್ರಮ'ದಿಂದ ದೂರ

ಕೆ.ನೀಲಾ
ಉಡುಪಿ, ಜು. 31: ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯ ಶ್ರೀತರಳಬಾಳು ಜಗದ್ಗುರು ಶಾಖಾ ಮಠದ ಸಹಮತ ವೇದಿಕೆಯ ವತಿಯಿಂದ ಆ. 2ರಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿರುವ ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಲು ಒಪ್ಪಿಕೊಂಡಿದ್ದು, ಇದರಲ್ಲಿ ವಚನ ಸಿದ್ಧಾಂತದ ವಿರೋಧಿಗಳೆನಿಸಿಕೊಂಡವರು ಕಾಣಿಸಿಕೊಂಡಿರುವುದರಿಂದ ಉಡುಪಿಯ ಈ ಕಾರ್ಯಕ್ರಮದಿಂದ ದೂರ ಇರಲು ನಿರ್ಧರಿಸಿದ್ದೇನೆ ಎಂದು ಗುಲ್ಬರ್ಗಾದ ಚಿಂತಕಿ ಕೆ.ನೀಲಾ ತಿಳಿಸಿದ್ದಾರೆ.
ಉಡುಪಿಯ ಪುರಭವನದಲ್ಲಿ ನಡೆಯಲಿರುವ ಮತ್ತೆ ಕಲ್ಯಾಣ ಕಾರ್ಯಕ್ರಮದ ಸಾರ್ವಜನಿಕ ಸಮಾವೇಶದಲ್ಲಿ ಕೆ.ನೀಲಾ ಅವರಿಂದ ‘ವಚನಗಳ ಸಮಾನತೆಯ ಆಶಯ’ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂಬಂಧ ಆಮಂತ್ರಣ ಪತ್ರಿಕೆಯನ್ನು ಕೂಡ ಜು.28ರಂದು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಬಿಜೆಪಿಯ ಶಾಸಕರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಕೆ.ನೀಲಾ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಭಾರತವು ಚಾತುರ್ವರ್ಣ ವ್ಯವಸ್ಥೆಯಲ್ಲಿ ನಲುಗುತ್ತಿರುವ ಹೊತ್ತಿನಲ್ಲಿ ಬಸವಾದಿ ಶರಣರು ಸಮತೆಯ ತತ್ವವನ್ನು ಕಟ್ಟಿಕೊಟ್ಟಿದ್ದಾರೆ. ದಯೆಯಿಲ್ಲದ ಧರ್ಮ ಅದಾವುದಯ್ಯ ಎಂದು ಪ್ರಶ್ನಿಸಿ ದಯೆಯೇ ಧರ್ಮದ ಮೂಲ ಎಂಬುದನ್ನು ಮನನ ಮಾಡಿಸಿದ್ದಾರೆ. ಇಂತಹ ವಚನ ಚಳುವಳಿಯ ಮಹತಿ ಯನ್ನು ನುಡಿಯೊಳಗಾಗಿ ನಡೆಯಬೇಕಾದ ಹೊಣೆಯು ಎಲ್ಲ ವಿವೇಕವಂತರ ಮೇಲಿದೆ. ಇಂತಹ ಸಂದರ್ಭದಲ್ಲಿ ’ಮತ್ತೆ ಕಲ್ಯಾಣ’ ಅಭಿಯಾನವು ನಡೆಯುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದು ಮಹತ್ವದ ಅಭಿಯಾನವಾಗಿರುವುದರಿಂದ ನಾಡಿನ ಪ್ರಜ್ಞಾವಂತರು ಇದರಲ್ಲಿ ಕೈಜೋಡಿಸಿದ್ದಾರೆ. ಆದರೆ ಮತ್ತೆ ಕಲ್ಯಾಣದ ಅಭಿಯಾನವು ಮಂಗಳೂರು ಮತ್ತು ಉಡುಪಿಯಲ್ಲಿ ವಚನ ತತ್ವಕ್ಕೆ ವಿರುದ್ಧವಾಗಿರುವ ಸಿದ್ಧಾಂತದ ಡಾ.ಮೋಹನ ಆಳ್ವ ಮತ್ತು ಶಾಸಕ ರಘುಪತಿ ಭಟ್ಟ ರಂಥವರನ್ನು ಒಳಗೊಂಡು ಕಾರ್ಯಕ್ರಮ ರೂಪಿಸಲಾಗಿದೆ. ಕರ್ಮಸಿದ್ಧಾಂತವನ್ನೇ ಪುನರ್ ಸ್ಥಾಪಿಸಲೆಂದೇ ಟೊಂಕ ಕಟ್ಟಿ ನಿಂತಿರುವ ಸಂಘ ಪರಿವಾರ ಅರ್ಥಾತ್ ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿಯ ಶಾಸಕರು ಇವರುಗಳೊಂದಿಗೆ ವಚನ ಸಿದ್ಧಾಂತಿಗಳಾದವರಿಗೆ ವೇದಿಕೆ ಹಂಚಿಕೊಳ್ಳಲಾಗದು ಎಂದು ಕೆ.ನೀಲಾ ಹೇಳಿದ್ದಾರೆ.
ಕೋಮುವಾದಿ ಸಂಘಪರಿವಾರದ ಯಾವುದೇ ತತ್ವ ಸಿದ್ಧಾಂತಗಳೊಂದಿಗೆ ವಚನ ಸಿದ್ಧಾಂತವನ್ನು ಸಮೀಕರಿಸಲಾಗದು. ಸನಾತನ ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು, ದಲಿತರನ್ನು, ಹಿಂದುಳಿದವರನ್ನು ಮಹಿಳೆಯರನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡುತ್ತಿರುವ ಸಂಘಪರಿವಾರದ, ಯಾವುದೇ ಸಂಘಟನೆಯ ಕಾರ್ಯಕರ್ತರೊಂದಿಗೆ ಸಭೆಯನ್ನು ಹಂಚಿಕೊಳ್ಳುವುದು ಬಸವ ಪರಂಪರೆಗೆ ಮಾಡುವ ದ್ರೋಹವಾಗುವುದು ಎಂಬುದು ನನ್ನ ನಂಬಿಕೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಂಘ ಪರಿವಾರವೆಂದರೆ ಕರ್ಮ ಸಿದ್ಧಾಂತ, ಚಾತುರ್ವರ್ಣ ವ್ಯವಸ್ಥೆ, ಪುರೋಹಿತಶಾಹಿ ಅಲ್ಲದೇ ಮತ್ತೇನೂ ಅಲ್ಲ. ವೇದಕ್ಕೆ ಒರೆಯನಿಕ್ಕಿ ಶಾಸ್ತ್ರಕ್ಕೆ ನಿಗಳವನಿಕ್ಕಿ ವಚನ ತತ್ವದ ಮೌಲ್ಯ ಎತ್ತಿ ಹಿಡಿಯಬೇಕಾದ ಈ ಸಂದರ್ಭ ಇದಾಗಿದೆ. ಕೋಮುವಾದಿ ವ್ಯಕ್ತಿ ಶಕ್ತಿ ಸಂಘಟನೆಗಳಿಂದ 'ಮತ್ತೆ ಕಲ್ಯಾಣ’ ವೇದಿಕೆಯು ದೂರ ಉಳಿಯಬೇಕೆಂದು ಅವರು ಹೇಳಿಕೆಯಲ್ಲಿ ವಿನಂತಿಸಿ ಕೊಂಡಿದ್ದಾರೆ.







