ಸಿದ್ಧಾರ್ಥ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದರು: ಡಿ.ಕೆ.ಶಿವಕುಮಾರ್

ಬೆಂಗಳೂರು, ಜು.31: ಯುವ ಉದ್ಯಮಿ, ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ 50 ಸಾವಿರ ಜನರಿಗೆ, ಅದರಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ, ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದರು. ಅವರ ಜೀವನ ಈ ರೀತಿ ಅಂತ್ಯ ಕಂಡಿರುವುದನ್ನು ನೋಡಿದರೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧಾರ್ಥ ಕನ್ನಡ ನಾಡಿನ ಆಸ್ತಿ. ಅವರನ್ನು ಕಳೆದುಕೊಂಡು ನಾವು ಭರಿಸಲಾರದ ನಷ್ಟ ಅನುಭವಿಸಿದ್ದೇವೆ. ಒಬ್ಬ ಕನ್ನಡಿಗನಾಗಿ ಇಷ್ಟು ದೊಡ್ಡ ಉದ್ಯಮ ಸೃಷ್ಟಿ ಮಾಡಿದ್ದರು ಎಂದರು.
ಸಿದ್ಧಾರ್ಥ ವಾಪಸ್ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ, ನನ್ನ ನಿರೀಕ್ಷೆ ಸುಳ್ಳಾಗಿದೆ. ಅವರ ಬದುಕು ಇಂತಹ ಅಂತ್ಯ ಕಾಣಬಾರದಿತ್ತು. ಅವರೊಬ್ಬ ಮಿತಭಾಷಿ, ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ. ಧೈರ್ಯವಂತರಾಗಿದ್ದ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
ಅವರ ಮತ್ತು ನನ್ನ ನಡುವೆ ಉತ್ತಮ ಒಡನಾಟವಿತ್ತು. ಅವರು ನನ್ನನ್ನು ಭೇಟಿ ಮಾಡಬೇಕು ಎಂದು ಹೇಳಿದ್ದರು. ಯಾವ ಒತ್ತಡದಲ್ಲಿದ್ದರೋ? ಯಾವ ನೋವು ಅವರನ್ನು ಕಾಡುತ್ತಿತ್ತೋ? ನನ್ನ ಬಳಿ ಏನು ಹೇಳಿಕೊಳ್ಳಲು ಬಯಸಿದ್ದರೋ ಗೊತ್ತಿಲ್ಲ. ನಾನು ಅವರನ್ನು ಭೇಟಿ ಮಾಡುವ ಮುನ್ನ ಈ ರೀತಿ ಆಗುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಶಿವಕುಮಾರ್ ತಿಳಿಸಿದರು.
ಬೇರೆ ವಿಚಾರಕ್ಕೆ ಕೈ ಹಾಕದೆ ತಮ್ಮ ಬದುಕನ್ನು ಅಚ್ಚುಕಟ್ಟಾಗಿ ಬಾಳುತ್ತಿದ್ದ ವ್ಯಕ್ತಿ ಈಗ ಕೊನೆ ಉಸಿರೆಳೆದಿದ್ದಾರೆ. ಅವರ ಅನುಯಾಯಿಗಳು, ಸ್ನೇಹಿತರು, ಕುಟುಂಬ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.
ತೆರಿಗೆ ಅಧಿಕಾರಿಗಳು ಆತುರದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಸಿದ್ಧಾರ್ಥ ಅವರೊಬ್ಬ ದೊಡ್ಡ ಉದ್ಯಮಿ. ಅವರಿಗೆ ಲೆಕ್ಕವೇನು ಗೊತ್ತಿಲ್ಲದೆ ಇರಲಿಲ್ಲ. ಆದರೂ ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಎಲ್ಲವನ್ನು ಆ ದೇವರೇ ನೋಡಿಕೊಳ್ಳಲಿ ಎಂದು ಶಿವಕುಮಾರ್ ತಿಳಿಸಿದರು.







