7 ವರ್ಷದ ಬಾಲಕನ ಬಾಯಿಯಿಂದ 527 ಹಲ್ಲುಗಳನ್ನು ಹೊರತೆಗೆದ ವೈದ್ಯರು!

Photo: timesofindia
ಚೆನ್ನೈ, ಜು.31: ಚೆನ್ನೈನ ಸವಿತಾ ದಂತ ವೈದ್ಯಕೀಯ ಕಾಲೇಜು ಆಸ್ಪತ್ರೆಯ ದಂತ ವೈದ್ಯರು 7 ವರ್ಷದ ಬಾಲಕನ ದವಡೆಯಿಂದ 527 ಹಲ್ಲುಗಳನ್ನು ಶಸ್ತ್ರಕ್ರಿಯೆಯ ಮೂಲಕ ಹೊರತೆಗೆದಿದ್ದಾರೆ.
ಬಾಲಕ ರವೀಂದ್ರನಾಥ್ ನ ಬಲ ಕೆನ್ನೆ ಸ್ವಲ್ಪ ಊದಿಕೊಂಡಿದ್ದನ್ನು ಗಮನಿಸಿದ್ದ ಆತನ ಹೆತ್ತವರು ಹಲ್ಲು ಹುಳುಕಿನಿಂದ ಹೀಗಾಗಿರಬಹುದೆಂದು ಅಂದುಕೊಂಡಿದ್ದರು. ಆದರೆ ವೈದ್ಯರ ಬಳಿ ತೆರಳಿದಾಗಲೇ ಬಾಲಕನ ಸಮಸ್ಯೆ ಅವರಿಗೆ ತಿಳಿದು ಬಂದಿತ್ತು. ಬಾಲಕನ ಹೆತ್ತವರು ಈ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರೂ ವೈದ್ಯರು ಹಾಗೂ ಅಲ್ಲಿನ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಶಸ್ತ್ರಕ್ರಿಯೆಗೆ ಬಾಲಕನ ಮನವೊಲಿಸಲು ಗಂಟೆಗಳೇ ಬೇಕಾಯಿತು.
ಸುಮಾರು ಐದು ಗಂಟೆ ತನಕ ನಡೆದ ಶಸ್ತ್ರಕ್ರಿಯೆಯಲ್ಲಿ ದವಡೆಯ ಮೂಳೆಯೊಳಗಿದ್ದ 527 ಹಲ್ಲುಗಳನ್ನು ವೈದ್ಯರು ಅತ್ಯಂತ ಜಾಗರೂಕತೆಯಿಂದ ಹೊರತೆಗೆದಿದ್ದು, ಬಾಲಕನ 21 ಸಹಜ ಹಲ್ಲುಗಳಿಗೆ ಈ ಸಂದರ್ಭ ಯಾವುದೇ ಹಾನಿಯುಂಟಾಗಿಲ್ಲ.
ಶಸ್ತ್ರಕ್ರಿಯೆಯ ಬಳಿಕ ಈಗ ಗುಣಮುಖನಾಗಿರುವ ಬಾಲಕ ನಗುತ್ತಾ ಈಗ ನೋವಿಲ್ಲ ಎಂದು ಮಾಧ್ಯಮ ಮಂದಿಯ ಮುಂದೆ ತನ್ನ ಸ್ವಲ್ಪ ಊದಿಕೊಂಡಿರುವ ಕೆನ್ನೆಯನ್ನು ಮುಟ್ಟುತ್ತಾ ಹೇಳಿದ್ದಾನೆ.
ಬಾಲಕನ ದವಡೆಯಲ್ಲಿ ಇಷ್ಟೊಂದು ಹಲ್ಲುಗಳು ಹೇಗೆ ಹುಟ್ಟಿಕೊಂಡವು ಎಂಬ ಬಗ್ಗೆ ವೈದ್ಯರು ನಿಖರವಾಗಿ ಏನೂ ಹೇಳಿಲ್ಲವಾದರೂ ಮೊಬೈಲ್ ಟವರುಗಳಿಂದುಂಟಾಗುವ ವಿಕಿರಣ ಅಥವಾ ಅನುವಂಶೀಯ ಕಾರಣಗಳಿಂದಾಗಿ ಹೀಗಾಗಿರಬಹುದೆಂದು ಹೇಳಿದ್ದಾರೆ.