ಆ.23-24: ಉಡುಪಿ ಶ್ರೀಕೃಷ್ಣಾಷ್ಟಮಿ- ಲೀಲೋತ್ಸವ ಆಚರಣೆ
ಉಡುಪಿ, ಜು.31: ಉಡುಪಿ ಪರ್ಯಾಯ ಪಲಿಮಾರು ಮಠ, ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಆ.23ರಂದು ಶ್ರೀಕೃಷ್ಣಾಷ್ಟಮಿ ಹಾಗೂ 24ರಂದು ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ)ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.23ರಂದು ರಾತ್ರಿ ಶ್ರೀಕೃಷ್ಣನಿಗೆ ಮಹಾಪೂಜೆ ನೆರವೇರಿಸಿ, ಮಧ್ಯ ರಾತ್ರಿ 12:12ಕ್ಕೆ ಚಂದ್ರೋದಯ ಕಾಲಕ್ಕೆ ಅರ್ಘ್ಯ ಪ್ರದಾನ ಮಾಡಲಾಗುವುದು. ಜು.24ರಂದು ಸಂಜೆ 3ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ ನಡೆಯಲಿದೆ ಎಂದರು.
ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಆ.3ರಂದು ಪ್ರಬಂಧ ಸ್ಪರ್ಧೆ, ಆ.4ರಂದು ಭಕ್ತಿ ಸಂಗೀತ ಸ್ಪರ್ಧೆ, ಆ.10ರಂದು ಚಿತ್ರಕಲೆ ಸ್ಪರ್ಧೆ, ಆ.11ರಂದು ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಆ.12ರಂದು ಭಕ್ತಿ ಸಂಗೀತ, ಆ.17ರಂದು ರಸಪ್ರಶ್ನೆ, ಆ.18 ರಂದು ರಂಗೋಲಿ ಸ್ಪರ್ಧೆ, ಆ.19ರಂದು ಮಕ್ಕಳಿಗೆ ಹುಲಿ ಕುಣಿತ, ಆ.21ರಂದು ಶಂಖ ಊದುವ ಸ್ಪರ್ಧೆ, ಆ.22ರಂದು ಬತ್ತಿ ಮಾಡುವ ಸ್ಪರ್ಧೆ ಯನ್ನು ಏರ್ಪಡಿಸಲಾಗಿದೆ.
ಆ.23ರಂದು ಶ್ರೀಕೃಷ್ಣಾಷ್ಟಮಿಯ ದಿನದಂದು ಮಕ್ಕಳಿಗೆ ಮುದ್ದು ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ ಮತ್ತು ಮೊಸರು ಕಡೆಯುವ ಸ್ಫರ್ಧೆಯನ್ನು ಆಯೋಜಿಸಲಾಗಿದೆ. ಶ್ರೀಕೃಷ್ಣ ಲೀಲೋತ್ಸವ ದಿನವಾದ ಆ.24ರಂದು ಸಂಜೆ 4ಗಂಟೆಗೆ ಹುಲಿವೇಷ ಹಾಗೂ ಜಾನಪದ ವೇಷ ಸ್ಪರ್ಧೆಯನ್ನು ರಾಜಾಂಗಣದಲ್ಲಿ ಆಯೋಜಿಸಲಾಗಿದೆ. ಪ್ರತಿಯೊಂದು ತಂಡಕ್ಕೂ ವಿಶೇಷ ಪುರಸ್ಕಾರ ನೀಡಲಾಗು ವುದು ಎಂದರು.
ಆ.18ರಂದು ಸಂಜೆ 5ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಜರಗಲಿದೆ. ಅಂದಿನಿಂದ ಆ.25ರವರೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿದೆ. ಚಿನ್ನರ ಸಂತರ್ಪಣೆ ಶಾಲೆಗಳ ಚಿಣ್ಣರಿಗೆ ಆಯಾ ಶಾಲೆಗಳಲ್ಲಿ ಪ್ರತ್ಯೇಕ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡಲಾಗುವುದು. ಅಲ್ಲದೆ ಈ ಎಲ್ಲ ಶಾಲೆಗಳಿಗೆ ಚಕ್ಕುಲಿ ಹಾಗೂ ಲಡ್ಡು ವಿತರಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.
‘ಅಷ್ಟಮಿ ಆಚರಣೆಯಲ್ಲಿ ಗೊಂದಲ ಇಲ್ಲ’
ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಜು.23 ಮತ್ತು 24ರಂದು ಆಚರಿಸುವ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಎಲ್ಲ ಜ್ಯೋತಿಷ್ಯರು ನಿರ್ಣಯ ಮಾಡಿರುವಂತೆ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಇದಕ್ಕೆ ಎಲ್ಲ ಅಷ್ಠ ಮಠಾಧೀಶರು ಕೂಡ ಸಮ್ಮತಿ ಸೂಚಿಸಿದ್ದಾರೆ.
ಇದರಲ್ಲಿ ಯಾವುದೇ ಗೊಂದಲ ಗಳಿಲ್ಲ. ರೋಹಿಣಿ ನಕ್ಷತ್ರ ಬಾರದ ಹಿನ್ನೆಲೆಯಲ್ಲಿ ಈ ಬಾರಿ ಕೃಷ್ಣ ಜಯಂತಿ ಯನ್ನು ಆಚರಿಸುವುದಿಲ್ಲ ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.







