ಉಡುಪಿಯಲ್ಲೂ ಖಾಸಗಿ ವೈದ್ಯರ ಮುಷ್ಕರ
ಉಡುಪಿ, ಜು.31:ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿದ ಕರೆಯಂತೆ ಉಡುಪಿ-ಕರಾವಳಿ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಇಂದು ಜಿಲ್ಲೆಯಲ್ಲಿ ಮುಷ್ಕರ ನಡೆಸಿದರು.
ಆದರೆ ಜಿಲ್ಲೆಯ ಖಾಸಗಿ ವೈದ್ಯರು ನಡೆಸಿದ ಈ ಟೋಕಲ್ ಮುಷ್ಕರ ವೈದ್ಯಕೀಯ ಸೇವೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು, ಖಾಸಗಿ ಆಸ್ಪತ್ರೆಗಳಲ್ಲೂ ತುರ್ತು ಸೇವೆಗಳು ಸೇರಿದಂತೆ ಅಗತ್ಯ ಸೇವೆಗಳು ಲಭ್ಯವಿದ್ದವು. ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿರಲಿಲ್ಲ.
ಆದರೆ ಬೆಳಗ್ಗೆ 6ರಿಂದ ವೈದ್ಯರ 24 ಗಂಟೆಗಳ ಮುಷ್ಕರ ಪ್ರಾರಂಭಗೊಂಡಿದ್ದು, ಓಪಿಡಿ ಸೇರಿದಂತೆ ಕೆಲವು ಸೇವೆಗಳು ಸ್ಧಗಿತಗೊಂಡಿದ್ದವು. ಮೆಡಿಲ್ ಸ್ಟೋರ್‌ಗಳು ಎಂದಿನಂತೆ ತೆರೆದಿದ್ದವು.
ಕೇಂದ್ರ ಸರಕಾರದ ವಿವಾದಾತ್ಮಕ ಎನ್‌ಎಂಸಿ ಮಸೂದೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರ ಪಡೆದಿದ್ದು, ಇನ್ನು ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಲು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಜನವಿರೋಧಿಯಾದ ಮಸೂದೆಗೆ ನಮ್ಮ ವಿರೋಧವನ್ನು ವ್ಯಕ್ತಪಡಿಸಲು 24 ಗಂಟೆಗಳ ಮುಷ್ಕರವನ್ನು ನಡೆಸಲಾಗುತ್ತಿದೆ ಎಂದು ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಪಿ.ಎಸ್. ಗುರುಮೂರ್ತಿ ಭಟ್ ತಿಳಿಸಿದ್ದಾರೆ.
ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡರೆ, ಈಗಿರುವ ಸ್ವಾಯತ್ತ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಬದಲು ಸರಕಾರವೇ ನೇಮಕ ಮಾಡುವ ನೇಷನಲ್ ಮೆಡಿಕಲ್ ಕೌನ್ಸಿಲ್ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ಹೇಳಿದರು.







