ನವವಿವಾಹಿತೆ ನಾಪತ್ತೆ: ದೂರು ದಾಖಲು

ಪುತ್ತೂರು: ಕಳೆದ 24 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಬುಧವಾರ ಪುತ್ತೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅವರ ಪತಿ ದೂರು ನೀಡಿದ್ದಾರೆ.
ಕೇರಳ ಕಣ್ಣೂರು ನಿವಾಸಿ ಕುಂಞಿ ನಂಬಿಯಾರ್ ಎಂಬವರ ಪುತ್ರ ಶಿನೋಜ್ ದೂರು ನೀಡಿದವರು. ಅನಾರೋಗ್ಯದ ನಿಮಿತ್ತ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಪತ್ನಿ ಪ್ರೇಮಾ ಅಲಿಯಾಸ್ ಪಿಂಕಿ(18) ಆಸ್ಪತ್ರೆಯಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಸೋಮವಾರಪೇಟೆಯ ಕುಶಾಲನಗರ ಮಧುಲಾಪುರ ನಿವಾಸಿ ತಾಯಮ್ಮ ಎಂಬವರ ಪುತ್ರಿ ಪ್ರೇಮಾ ಅಲಿಯಾಸ್ ಪಿಂಕಿ ಮತ್ತು ಕಣ್ಣೂರು ನಿವಾಸಿ ಶಿನೋಜ್ ಅವರ ವಿವಾಹವು ಜು.8ರಂದು ನಡೆದಿತ್ತು. ಜು.26ರಂದು ಶಿನೋಜ್ ತನ್ನ ಪತ್ನಿಯೊಂದಿಗೆ ಪುತ್ತೂರು ನಗರದ ಹಾರಾಡಿ ಎಂಬಲ್ಲಿರುವ ತನ್ನ ಸಹೋದರಿಯ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಪ್ರೇಮಾ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರೇಮ ಅವರು ಆಸ್ಪತ್ರೆಯ ಮಹಿಳಾ ವಾರ್ಡ್‍ನಲ್ಲಿ ದಾಖಲಾಗಿರುವುದರಿಂದ ಶಿನೋಜ್ ಆಸ್ಪತ್ರೆಯ ಹಾಲ್‍ನಲ್ಲಿ ಮಲಗಿದ್ದರು. ಬೆಳಗ್ಗಿನ ಜಾವ ಪತ್ನಿಯನ್ನು ನೋಡಲೆಂದು ವಾರ್ಡ್‍ಗೆ ತೆರಳಿದ್ದ ಸಂದರ್ಭ ಪತ್ನಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಇದೇ ಸಂದರ್ಭ ಪ್ರೇಮ ಅವರು ತನ್ನ ಪತಿ ಶಿನೋಜ್ ಅವರ ಮೊಬೈಲ್‍ಗೆ `ನಾನು ನನ್ನ ಪ್ರಿಯತಮನೊಂದಿಗೆ ಹೋಗಿದ್ದೇನೆ. ನನ್ನನ್ನು ಹುಡುಕಾಡಬೇಡಿ' ಎಂದು ಮೆಸೇಜ್ ಸಂದೇಶ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಮಹಿಳಾ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





