ಮುಂದಿನ ಪಂಚಾಯತ್ ಚುಣಾವಣೆಗೆ ಸನ್ನದ್ಧರಾಗಿ: ರಮನಾಥ ರೈ

ಬಂಟ್ವಾಳ, ಜು. 31: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅರಳ ಗ್ರಾಮ ಪಂಚಾಯತ್ ವಲಯ ಮಟ್ಟದ ಪಂಚಾಯತ್ ಮಿಲನ ಕಾರ್ಯಕ್ರಮ ಕುಟ್ಟಿಕಲ ಜಂಕ್ಷನ್‍ನಲ್ಲಿ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಪಕ್ಷದ ಸಂಘಟಣೆ ಹಾಗೂ ಬಲವರ್ಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮುಂದಿನ ಪಂಚಾಯತ್ ಚುಣಾವಣೆಗೆ ಸನ್ನದ್ಧರಾಗುವಂತೆ ವಿನಂತಿಸಿದ ಅವರು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ವಿರೋಧ ಪಕ್ಷದ ಅಪಪ್ರಚಾರ ಹಾಗೂ ಸುಳ್ಳು ಆರೋಪಗಳಿಗೆ ತಕ್ಕ ಉತ್ತರ ನೀಡುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕರ್ತರೇ ಪಕ್ಷದ ದೊಡ್ಡ ಆಸ್ತಿ. ಶಿಸ್ತಿನಿಂದ ಪಕ್ಷ ಸಂಘಟಣೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ವಿಧಾನ ಸಭೆ ಹಾಗೂ ಲೋಕ ಸಭೆ ಚುನಾವಣೆಯ ಮತಗಳ ಅಂಕಿ ಅಂಶವನ್ನು ಕಾರ್ಯಕರ್ತರ ಮುಂದೆ ಮಂಡಿಸಿ ಪಕ್ಷದ ಹಿನ್ನಡೆಯ ಬಗ್ಗೆ ಚರ್ಚಿಸಲಾಯಿತು.
ವಲಯ ಕಾಂಗ್ರೆಸ್, ಬೂತ್ ಸಮಿತಿ ರಚನೆ
ವಲಯ ಕಾಂಗ್ರೆಸ್ ಹಾಗೂ ಬೂತ್ ಸಮಿತಿಯನ್ನು ಪುನರಚಿಸಿ, ಅರಳ ಗ್ರಾಪಂ ಸಮಿತಿಯ ಅಧ್ಯಕ್ಷರಾಗಿ ಅಶ್ರಫ್ ಕುಟ್ಟಿಕಲ ಹಾಗೂ ಬೂತ್ ಸಮಿತಿಯ ಅಧ್ಯಕ್ಷ ಪುರಂದರ ಶೆಟ್ಟಿ, ಸಂತೋಷ್ ಜೋಯ್ ಪಿಂಟೊ, ಉಸ್ಮಾನ್, ಹನೀಫ್, ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜೈಸನ್ ಲೋಬೊ, ಮಹಿಳಾ ಅಧ್ಯಕ್ಷರಾಗಿ ಶಶಿಕಲಾ ಅವರನ್ನು ಆಯ್ಕೆ ಮಾಡಲಾಯಿತು.
ಪಕ್ಷದ ಮುಖಂಡರಾದ ಜಗದೀಶ್ ಕೊಯಿಲಾ, ರಮೇಶ್ ನಾಯಕ್ ರಾಯಿ, ರಿಯಾಝ್ ಹುಸೈನ್ ಬಂಟ್ವಾಳ, ದೇವಪ್ಪ ಕರ್ಕೆರ ಕರ್ಪೆ ಉಪಸ್ಥಿತರಿದ್ದರು. ಬೂತ್ ಸಮಿತಿಯ ಅದ್ಯಕ್ಷ ಉಸ್ಮಾನ್ ಸ್ವಾಗತಿಸಿದರು. ಪಂಚಾಯತ್ ಸದಸ್ಯ ಎಂ.ಬಿ. ಅಶ್ರಫ್ ವಂದಿಸಿದರು.







