ಮಾಸ್ಟರ್ಸ್ ಶೂಟಿಂಗ್ ಸ್ವರ್ಧೆ: ಕೇರಳದ ಎಲಿಝಬೆತ್‌ಗೆ ಚಿನ್ನ

ಹೊಸದಿಲ್ಲಿ, ಜು.31: ಸರ್ದಾರ್ ಸಜ್ಜನ್ ಸಿಂಗ್ ಸೇಥಿ ಸ್ಮಾರಕ ಮಾಸ್ಟರ್ಸ್ ಶೂಟಿಂಗ್ ಸ್ಪರ್ಧಾವಳಿಯಲ್ಲಿ ಕೇರಳದ ಎಲಿಝಬೆತ್ ಸುಸಾನ್ ಕೋಶಿ ಮಹಿಳೆಯರ 50 ಮೀ. ರೈಫಲ್ 3-ಪೊಸಿಶನ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದರು.
ಇಲ್ಲಿನ ಡಾ.ಕರ್ಣಿ ಸಿಂಗ್ ರೇಂಜ್‌ನಲ್ಲಿ ಬುಧವಾರ ನಡೆದ ಮೂರನೇ ದಿನದ ಸ್ಪರ್ಧೆಯಲ್ಲಿ ಎಲಿಝಬೆತ್ ಈ ಸಾಧನೆ ಮಾಡಿದರು.
ಎರಡು ವರ್ಷಗಳ ಹಿಂದೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಮೊದಲು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ದೇಶದ ಖಾಯಂ ಶೂಟಿಂಗ್ ಸ್ಪರ್ಧಿ ಆಗಿದ್ದ ಎಲಿಝಬೆತ್ ಬುಧವಾರ 460.1 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಮಹಾರಾಷ್ಟ್ರದ ಶೂಟರ್ ತೇಜಸ್ವಿನಿ ಸಾವಂತ್(455.6)ಬೆಳ್ಳಿ ಪದಕ ಜಯಿಸಿದರು. ಗುಜರಾತ್‌ನ ಹೇಮಾ ಕೆ.ಸಿ.ಕಂಚಿನ ಪದಕ ಗೆದ್ದುಕೊಂಡರು.
ಇದಕ್ಕೂ ಮೊದಲು ನಡೆದಿದ್ದ ಅರ್ಹತಾ ಸುತ್ತಿನಲ್ಲಿ 1161 ಅಂಕ ಗಳಿಸಿದ್ದ ಎಲಿಝಬೆತ್ ಆರನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು.
ಫೈನಲ್‌ನಲ್ಲಿ ಮೊದಲ 10 ಶಾಟ್ಸ್ ಗಳಲ್ಲಿ ಎಲಿಝಬೆತ್ ನಾಲ್ಕನೇ ಸ್ಥಾನದಲ್ಲಿದ್ದರು. 2ನೇ ಸುತ್ತಿನಲ್ಲಿ ಚೇತರಿಕೆಯ ಪ್ರದರ್ಶನ ನೀಡಿದರು.
ಏರ್‌ಇಂಡಿಯಾದ ಅನ್ನುರಾಜ್ ಸಿಂಗ್ ಹಾಗೂ ದೀಪಕ್ ಶರ್ಮಾ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ವಿಜಯಿಯಾದರು. ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪ್ರತಿಸ್ಪರ್ಧಿ ಒಎನ್‌ಜಿಸಿಯ ಶ್ವೇತಾ ಸಿಂಗ್ ಹಾಗೂ ಅಮನ್‌ಪ್ರೀತ್ ಸಿಂಗ್‌ರನ್ನು 17-5 ಅಂತರದಿಂದ ಸೋಲಿಸಿದರು.
ಭಾರತೀಯ ಸೇನೆಯನ್ನು ಪ್ರತಿನಿಧಿಸುತ್ತಿರುವ ಹಿರಿಯ ಶೂಟರ್ ಗುರುಪ್ರೀತ್ ಸಿಂಗ್ ಕ್ರೀಡಾಕೂಟದಲ್ಲಿ ಎರಡನೇ ಚಿನ್ನ ಜಯಿಸಿದರು. ಮಂಗಳವಾರ ಸೆಂಟರ್‌ಫೈಯರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಸಿಂಗ್ ಬುಧವಾರ ಪುರುಷರ 25 ಮೀ. ಸ್ಟಾಂಡರ್ಡ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.







