ಬಲವಂತದ ಮದುವೆ ವಿರುದ್ಧ ರಕ್ಷಣೆ ಕೋರಿದ ದುಬೈ ಆಡಳಿತಗಾರನ ಪತ್ನಿ

ಲಂಡನ್, ಜು. 31: ದುಬೈ ಆಡಳಿತಗಾರನ ಪರಿತ್ಯಕ್ತ ಪತ್ನಿಯು ಲಂಡನ್‌ನ ನ್ಯಾಯಾಲಯವೊಂದರಲ್ಲಿ, ಬಲವಂತದ ಮದುವೆಯಿಂದ ರಕ್ಷಣೆ ನೀಡುವ ಆದೇಶ (ಫೋರ್ಸ್‌ಡ್ ಮ್ಯಾರೇಜ್ ಪ್ರೊಟೆಕ್ಶನ್ ಆರ್ಡರ್) ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಪ್ರಧಾನಿ ಹಾಗೂ ದುಬೈ ಆಡಳಿತಗಾರ, 70 ವರ್ಷದ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್‌ರ 45 ವರ್ಷದ ಪತ್ನಿ ರಾಜಕುಮಾರಿ ಹಯಾ ಈ ಆದೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಮಕ್ಕಳ ಸುಪರ್ದಿಯನ್ನೂ ತನಗೆ ನೀಡಬೇಕು ಎಂದು ಮನವಿ ಮಾಡಿರುವ ಅವರು, ಲೈಂಗಿಕ ಕಿರುಕುಳ ವಿರೋಧಿ ಆದೇಶವೊಂದನ್ನೂ ನೀಡುವಂತೆ ಕೋರಿದ್ದಾರೆ.
ಮಕ್ಕಳ ಸುಪರ್ದಿಯ ವಿಷಯದಲ್ಲಿ ದಂಪತಿ ಕಾನೂನು ಸಮರದಲ್ಲಿ ತೊಡಗಿದ್ದಾರೆ. ಅವರ ಮೊಕದ್ದಮೆಯ ವಿಚಾರಣೆಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಹೈಕೋರ್ಟ್‌ನ ಕೌಟುಂಬಿಕ ಘಟಕದ ಅಧ್ಯಕ್ಷ ಹಾಗೂ ನ್ಯಾಯಾಧೀಶ ಆ್ಯಂಡ್ರೂ ಮೆಕ್‌ಫಾರ್‌ಲೇನ್ ನಡೆಸುತ್ತಿದ್ದಾರೆ.
ಮಕ್ಕಳನ್ನು ದುಬೈಗೆ ಹಿಂದಿರುಗಿಸುವಂತೆ ಕೋರಿ ಶೇಖ್ ಮುಹಮ್ಮದ್ ಕೂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಜಕುಮಾರಿ ಹಯಾ ಜೋರ್ಡಾನ್‌ನ ದಿವಂಗತ ದೊರೆ ಹುಸೈನ್‌ರ ಪುತ್ರಿ ಹಾಗೂ ಜೋರ್ಡಾನ್‌ನ ಹಾಲಿ ದೊರೆ ದ್ವಿತೀಯ ಅಬ್ದುಲ್ಲಾರ ಮಲಸಹೋದರಿಯಾಗಿದ್ದಾರೆ.
ಬಲವಂತದ ಮದುವೆಗೆ ಒಳಗಾಗುತ್ತಿರುವವರಿಗೆ ಅಥವಾ ಈಗಾಗಲೇ ಬಲವಂತವಾಗಿ ಮದುವೆಯಾಗಿರುವವರಿಗೆ ಸಹಾಯ ಮಾಡಲು ಈ ಆದೇಶವನ್ನು ಬಳಸಬಹುದಾಗಿದೆ.







