ಪಿಒಪಿ ಗಣೇಶ ಮೂರ್ತಿಗಳ ತಯಾರಕರ ವಿರುದ್ಧ ಕ್ರಮಕ್ಕೆ ಸೂಚನೆ

ಬೆಂಗಳೂರು, ಜು.31: ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಒಪಿ ಗಣೇಶಮೂರ್ತಿಗಳನ್ನು ಮಾರಾಟ ಮಾಡುವುದು, ತಯಾರಿಸುವುದು ಹಾಗೂ ಸಂಗ್ರಹಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪಿಒಪಿ ಗಣೇಶ ಮೂರ್ತಿ ನಿಷೇಧಿಸುವ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವ ಸ್ಥಳ, ತಯಾರಿಸುವ ಸ್ಥಳ, ಗೋಡನ್‌ಗಳಿಗೆ ಭೇಟಿ ನೀಡಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಎಲ್ಲ ಸಂಗ್ರಹವಾದ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಬೇಕು ಎಂದು ಹೇಳಿದ್ದಾರೆ.
ಸಾರ್ವಜನಿಕರು ಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಬಳಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಆದರೂ ನಗರದಲ್ಲಿ ಇದು ಕಡಿಮೆಯಾಗಿಲ್ಲ. ಆರೋಗ್ಯಾಧಿಕಾರಿಗಳು ಈ ಸಂಬಂಧ ಜಾಗೃತಿ ಮೂಡಿಸಬೇಕು. ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡದಂತೆ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ನಗರಕ್ಕೆ ಹೊರ ರಾಜ್ಯಗಳಿಂದ ಗಣೇಶ ಚತುರ್ಥಿಯ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಿಒಪಿ ಮೂರ್ತಿಗಳು ಪ್ರವೇಶ ಮಾಡದಂತೆ ಕ್ರಮ ವಹಿಸಬೇಕು. ಹಾಗೂ ಅವುಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಸ್ಥಳಗಳಿಗೆ ಪೊಲೀಸ್ ಭೇಟಿ ನೀಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಈ ಬಾರಿ ಪಿಒಪಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಹಾಗೂ ಕೆರೆಗಳಲ್ಲಿ ವಿಸರ್ಜನೆ ಮಾಡಲು ಅನುಮತಿ ನೀಡುವುದಿಲ್ಲ. ಕಳೆದ ವರ್ಷದಂತೆ ಈ ಬಾರಿಯೂ ಬಿಬಿಎಂಪಿ, ಬೆಸ್ಕಾಂ, ಪೊಲೀಸ್ ಇಲಾಖೆಯಿಂದ ಏಕಗವಾಕ್ಷಿ ಪದ್ಧತಿಯಲ್ಲಿಯೇ ಗಣೇಶ ಮೂರ್ತಿಗಳನ್ನು ಕೂರಿಸಲು ಅವಕಾಶ ನೀಡಲಾಗುತ್ತದೆ. ಪಾಲಿಕೆ ಮೈದಾನಗಳಲ್ಲಿ ಕೂರಿಸುವ ಗಣೇಶ ಮೂರ್ತಿಗಳಿಗೆ ನೆಲ ಬಾಡಿಗೆಯನ್ನು ಸಂಗ್ರಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಗರದಲ್ಲಿರುವ ಪ್ರಮುಖ ಕೆರೆಗಳ ಬಳಿ ತಾತ್ಕಾಲಿಕ ಹೊಂಡಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಸಂಚಾರಿ ವಿಸರ್ಜನಾ ತೊಟ್ಟಿಗಳನ್ನು ಎಲ್ಲೆಲ್ಲಿ ನಿರ್ಮಾಣ ಮಾಡಬೇಕು ಎಂಬ ಪಟ್ಟಿಯನ್ನು ಸಿದ್ಧಪಡಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಪಾಲಿಕೆ ಆರೋಗ್ಯಾಧಿಕಾರಿ ಸೇರಿದಂತೆ ಮತ್ತಿತರರಿದ್ದರು.







