ಟ್ರಂಪ್ ಜನಾಂಗೀಯವಾದಿ: ಸಮೀಕ್ಷೆಯಲ್ಲಿ ಭಾಗವಹಿಸಿದ 50 ಶೇ.ಕ್ಕೂ ಅಧಿಕ ಜನರ ಅಭಿಪ್ರಾಯ

ವಾಶಿಂಗ್ಟನ್, ಜು. 31: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಾಂಗೀಯವಾದಿ ಎಂಬುದಾಗಿ ಅಮೆರಿಕದ ಮತದಾರರ ಪೈಕಿ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಭಾಗ ಮಂದಿ ಅಭಿಪ್ರಾಯಪಡುತ್ತಾರೆ ಎಂದು ಮಂಗಳವಾರ ಪ್ರಕಟಗೊಂಡ ಸಮೀಕ್ಷೆಯೊಂದು ತಿಳಿಸಿದೆ.
ಕ್ವಿನಿಪಿಯಾಕ್ ವಿಶ್ವವಿದ್ಯಾನಿಲಯ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ 51 ಶೇಕಡ ಮಂದಿ, ಟ್ರಂಪ್ ಜನಾಂಗೀಯವಾದಿ ಎಂಬುದಾಗಿ ಭಾವಿಸುತ್ತಾರೆ ಹಾಗೂ 45 ಶೇಕಡ ಮಂದಿ ಜನಾಂಗೀಯವಾದಿ ಅಲ್ಲ ಎಂದು ಭಾವಿಸುತ್ತಾರೆ.
ಬಿಳಿಯ ಮತದಾರರ ಪೈಕಿ 46 ಶೇಕಡ, ಅಧ್ಯಕ್ಷರು ಜನಾಂಗೀಯವಾದಿ ಎಂದು ಹೇಳಿದರೆ, 50 ಶೇಕಡ ಅಲ್ಲ ಎಂದು ಹೇಳುತ್ತಾರೆ.
ಕರಿಯ ಮತದಾರರ ಪೈಕಿ 80 ಶೇಕಡ, ಟ್ರಂಪ್ ಜನಾಂಗೀಯವಾದಿ ಎಂದು ಅಭಿಪ್ರಾಯಪಡುತ್ತಾರೆ ಹಾಗೂ 11 ಶೇಕಡ ಅಲ್ಲ ಎನ್ನುತ್ತಾರೆ.
ಹಿಸ್ಪಾನಿಕ್ ಮತದಾರರ ಪೈಕಿ, 55 ಶೇಕಡ ಟ್ರಂಪ್ ಜನಾಂಗೀಯವಾದಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಹಾಗೂ 44 ಶೇಕಡ ಅಲ್ಲ ಎಂದಿದ್ದಾರೆ.
ಟ್ರಂಪ್ ಜನಾಂಗೀಯವಾದಿ ಎಂಬ ನಿರ್ಧಾರಕ್ಕೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. 59 ಶೇಕಡ ಮಹಿಳೆಯರು ಅವರು ಜನಾಂಗೀಯವಾದಿ ಎಂದಿದ್ದರೆ, 36 ಶೇಕಡ ಮಂದಿ ಅಲ್ಲ ಎಂದಿದ್ದಾರೆ.
ಟ್ರಂಪ್ ಜನಾಂಗೀಯವಾದಿ ಅಲ್ಲ ಎಂಬ ನಿರ್ಧಾರಕ್ಕೆ 55 ಶೇಕಡ ಪುರುಷರು ಬಂದಿದ್ದರೆ, ಜನಾಂಗೀಯವಾದಿ ಎಂಬ ನಿರ್ಧಾರವನ್ನು 41 ಶೇಕಡ ಪುರುಷರು ತೆಗೆದುಕೊಂಡಿದ್ದಾರೆ.







