ಬಂಧನ ಕೇಂದ್ರಗಳಲ್ಲಿದ್ದ ಹೆಚ್ಚಿನವರು ‘ಸಮಾಜಕ್ಕೆ ವಾಪಸಾಗಿದ್ದಾರೆ’: ಕ್ಸಿನ್‌ಜಿಯಾಂಗ್ ನಾಯಕ
ಬೀಜಿಂಗ್, ಜು. 31: ಚೀನಾದ ಕ್ಸಿನ್‌ಜಿಯಾಂಗ್ ವಲಯದಲ್ಲಿರುವ ಸಾಮೂಹಿಕ ಬಂಧನ ಕೇಂದ್ರಗಳಲ್ಲಿದ್ದ ಹೆಚ್ಚಿನ ಜನರು ‘ಸಮಾಜಕ್ಕೆ ವಾಪಸಾಗಿದ್ದಾರೆ’ ಎಂದು ವಲಯದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಎಷ್ಟು ಮಂದಿಯನ್ನು ಬಂಧನ ಕೇಂದ್ರಗಳಲ್ಲಿಡಲಾಗಿತ್ತು ಎಂಬ ಕುರಿತ ಮಾಹಿತಿಯನ್ನು ನೀಡಲು ಅವರು ನಿರಾಕರಿಸಿದ್ದಾರೆ.
ಚೀನಾದ ಪಶ್ಚಿಮ ವಲಯದ ಶಿಬಿರಗಳಲ್ಲಿ ಕನಿಷ್ಠ 10 ಲಕ್ಷ ಉಯಿಘರ್ ಮುಸ್ಲಿಮರು ಹಾಗೂ ಇತರ ಮುಸ್ಲಿಮ್ ಅಲ್ಪಸಂಖ್ಯಾತ ಗುಂಪುಗಳ ಸದಸ್ಯರನ್ನು ಇಡಲಾಗಿದೆ ಎಂಬುದಾಗಿ ವಿಶ್ವಸಂಸ್ಥೆಯ ಪರಿಣತರು ಮತ್ತು ಮಾನಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ.
ಜನರಲ್ಲಿರುವ ಧಾರ್ಮಿಕ ತೀವ್ರವಾದವನ್ನು ಹೋಗಲಾಡಿಸಲು ಹಾಗೂ ಅವರಿಗೆ ಹೊಸ ವೃತ್ತಿ ಕೌಶಲಗಳನ್ನು ಕಲಿಸಲು ವೃತ್ತಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಚೀನಾದ ಅಧಿಕಾರಿಗಳು ಹೇಳುತ್ತಾರೆ.
ಇಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ, ಈ ಕೇಂದ್ರಗಳಲ್ಲಿ ಎಷ್ಟು ಮಂದಿಯನ್ನು ಇರಿಸಲಾಗಿದೆ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕ್ಸಿನ್‌ಜಿಯಾಂಗ್ ಉಪಾಧ್ಯಕ್ಷ ಅಲ್ಕೀನ್ ಟುನಿಯಝ್, ‘‘ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ’’ ಎಂದರು. ‘‘ಅವರ ಪೈಕಿ ಹೆಚ್ಚಿನವರು ಯಶಸ್ವಿಯಾಗಿ ಕೆಲಸ ಪಡೆದುಕೊಂಡಿದ್ದಾರೆ’’ ಎಂದು ಅವರು ನುಡಿದರು.
‘‘ತರಬೇತಿ ಪಡೆದ ಹೆಚ್ಚಿನವರು ಈಗಾಗಲೇ ಸಮಾಜಕ್ಕೆ ಮರಳಿದ್ದಾರೆ, ಮನೆಗೆ ಹಿಂದಿರುಗಿದ್ದಾರೆ’’ ಎಂದರು.