ಸಿದ್ದಾರ್ಥ ಇಂತಹ ಅನಾಹುತಕ್ಕೆ ಮುಂದಾಗುತ್ತಾರೆಂಬ ಕಲ್ಪನೆಯೂ ಇರಲಿಲ್ಲ: ಸಿಎಂ ಯಡಿಯೂರಪ್ಪ

ಚಿಕ್ಕಮಗಳೂರು, ಜು.31: ಮಲೆನಾಡಿನ ಕಾಫಿಯನ್ನು ವಿಶ್ವಕ್ಕೆ ಪರಿಚಯಿಸಿ, ಸಾಪ್ಟ್ ವೇರ್ ಕಂಪೆನಿಗಳನ್ನು ಹುಟ್ಟುಹಾಕಿ ಲಕ್ಷಾಂತರ ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ನೀಡಿದ್ದ ವಿ.ಜಿ.ಸಿದ್ದಾರ್ಥ ಅವರ ಆತ್ಮಹತ್ಯೆ ನಿರ್ಧಾರದಿಂದ ನಾಡಿನ ಜನರಿಗಾದಂತೆ ನನಗೂ ಅಘಾತವಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ವಿ.ಜಿ.ಸಿದ್ದಾರ್ಥ ಅವರ ಅಂತಿಮ ದರ್ಶಕ್ಕೆ ನಗರಕ್ಕಾಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯನಾಗಿ ಅವರ ಮಾರ್ಗದರ್ಶನದಲ್ಲಿ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಿದ್ದಾರ್ಥ ಇಂತಹ ಅನಾಹುತ ಮಾಡಿಕೊಳ್ಳುತ್ತಾರೆಂದು ಯಾರೂ ಕಲ್ಪನೆ ಮಾಡಿಕೊಂಡಿರಲಿಲ್ಲ. ಸಿದ್ದಾರ್ಥ ಅವರ ಕುಟುಂಬ ಹಾಗೂ ಎಸ್.ಎಂ.ಕೃಷ್ಣ ಅವರಿಗೆ ಹೇಗೆ ಸಾಂತ್ವಾನ ಹೇಳಬೇಕೋ ತಿಳಿಯುತ್ತಿಲ್ಲ ಎಂದು ಸಿಎಂ ತಿಳಿಸಿದರು.
ಸಿದ್ದಾರ್ಥ ಅವರ ಇಬ್ಬರು ಮಕ್ಕಳಿಗೆ ಸಿದ್ದಾರ್ಥ ಅವರ ಉದ್ಯಮಗಳನ್ನು ಮುನ್ನಡೆಸುವ ಸಾಮರ್ಥ್ಯವಿದೆ. ಅವರು ಈ ಉದ್ಯಮಗಳನ್ನು ಮುನ್ನಡೆಸುತ್ತಾರೆ. ಮತ್ತಷ್ಟು ಯುವಜನತೆಗೆ ಉದ್ಯೋಗ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ಇದೇ ವೇಳೆ ಸಿಎಂ ನುಡಿದರು.





