ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಹತ್ಯೆ ಯತ್ನ: ಸೆಂಗಾರ್, ಇತರ 10 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ ಸಿಬಿಐ

ಹೊಸದಿಲ್ಲಿ, ಜು. 31: ಅಪಘಾತ ನಡೆಸಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಹತ್ಯೆ ಯತ್ನದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಹಾಗೂ ಇತರ 10 ಮಂದಿ ವಿರುದ್ಧ ಸಿಬಿಐ ಹತ್ಯೆ ಯತ್ನ ಪ್ರಕರಣ ದಾಖಲಿಸಿದೆ.
ಇದಲ್ಲದೆ 20 ಅನಾಮಿಕ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಸಂಚು, ಹತ್ಯೆ, ಹತ್ಯೆಗೆ ಯತ್ನ ಹಾಗೂ ಕ್ರಿಮಿನಲ್ ಬೆದರಿಕೆಯ ಪ್ರಕರಣಗಳನ್ನು ದಾಖಲಿಸಿದೆ. ರವಿವಾರ ಸಂಭವಿಸಿದ ಭೀಕರ ಅಪಘಾತದ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹ ವ್ಯಕ್ತವಾದ ಬಳಿಕ, ಸಿಬಿಐ ಅಂತಿಮವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಸಿಬಿಐ ಈಗಾಗಲೆ ಉತ್ತರಪ್ರದೇಶ ಪೊಲೀಸರಿಂದ ಅಗತ್ಯ ಇರುವ ದಾಖಲೆಗಳು ಹಾಗೂ ಇತರ ವಿವರಗಳನ್ನು ಸಂಗ್ರಹಿಸಿದೆ. ಅಪಘಾತ ನಡೆದ ಸ್ಥಳಕ್ಕೆ ಬುಧವಾರ ಭೇಟಿ ನೀಡುವ ಮೂಲಕ ಸಿಬಿಐ ತನಿಖೆ ಆರಂಭಿಸಿದೆ.
ಅಪಘಾತ ಸ್ಥಳಕ್ಕೆ ಭೇಟಿ ನೀಡುವವರ ಬಗ್ಗೆ ಎಚ್ಚರ ವಹಿಸುವಂತೆ ಸಿಬಿಐ ತನ್ನ ಅಧಿಕಾರಿಗಳಿಗೆ ಸೂಚಿಸಿದೆ ಹಾಗೂ ಅಪಘಾತ ನಡೆದ ಸ್ಥಳ ಇರುವ ರಾಯ್ ಬರೇಲಿಯ ಗುರುಬಕ್ಷ್‌ಗಂಜ್ ಪೊಲೀಸ್ ಠಾಣೆಯಿಂದ ಪೊಲೀಸ್ ಅಧಿಕಾರಿಗಳಿಂದ ವಿವರ ಪಡೆದುಕೊಂಡಿದೆ. ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಗಂಭೀರ ಗಾಯಗೊಂಡಿರುವ ಟ್ರಕ್-ಕಾರು ಢಿಕ್ಕಿಯ ತನಿಖೆಯನ್ನು ಕೇಂದ್ರ ಸರಕಾರ ಮಂಗಳವಾರ ಸಿಬಿಐಗೆ ಹಸ್ತಾಂತರಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಅಪಘಾತದಲ್ಲಿ ಕುಮ್ಮಕ್ಕು ಹಾಗೂ ಪಿತೂರಿಯ ಕುರಿತ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂದು ಸಿಬ್ಬಂದಿ ತರಬೇತಿ ಇಲಾಖೆ ಆದೇಶ ಹೇಳಿತ್ತು.







