ಬೆಳಗಾವಿ: ಆ.1 ರಿಂದ ದೇಶದ ಪ್ರಪ್ರಥಮ ಮಹಿಳಾ ಸೇನಾ ಭರ್ತಿ ರ‍್ಯಾಲಿ
ಎಂಎಲ್‌ಐಆರ್‌ಸಿ ಶಿವಾಜಿ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ

ಬೆಳಗಾವಿ, ಜು.31: ದೇಶದ ಮೊಟ್ಟ ಮೊದಲ ಮಹಿಳಾ ಸೇನಾ ಭರ್ತಿ ರ‍್ಯಾಲಿ ಆ.1 ರಿಂದ 5ರವರೆಗೆ ಬೆಳಗಾವಿಯಲ್ಲಿ ನಡೆಯಲಿದೆ. ನಗರದಲ್ಲಿರುವ ಮರಾಠಾ ಲಘು ಪದಾತಿದಳ(ಎಂ.ಎಲ್.ಐ.ಆರ್.ಸಿ) ಕೇಂದ್ರದಲ್ಲಿರುವ ಶಿವಾಜಿ ಕ್ರೀಡಾಂಗಣದಲ್ಲಿ ಈ ರ‍್ಯಾಲಿ ನಡೆಯಲಿದೆ.
ದೇಶದಲ್ಲಿ ಮೊದಲ ಬಾರಿ ನಡೆಯುತ್ತಿರುವ ಮಹಿಳಾ ಮಿಲಿಟರಿ ಪೊಲೀಸ್ ಭರ್ತಿ ರ‍್ಯಾಲಿಯ ಸಿದ್ಧತೆ ಕುರಿತು ನೇಮಕಾತಿ ವಿಭಾಗದ ಉಪ ಮಹಾನಿರ್ದೇಶಕ ದಿಪೇಂದ್ರ ರಾವತ್ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದ ಅಭ್ಯರ್ಥಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್, ನಿಕೊಬಾರ್ ದ್ವೀಪಗಳು, ಪಾಂಡಿಚೇರಿ ರಾಜ್ಯದ ಲಕ್ಷದೀಪ ಹಾಗೂ ಮಾಹೆ ಜಿಲ್ಲೆಯ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಿದ್ದ ಸುಮಾರು ಹದಿನೈದು ಸಾವಿರ ಅಭ್ಯರ್ಥಿಗಳ ಪೈಕಿ ಮೆಟ್ರಿಕ್ಯುಲೇಷನ್ ಮೆರಿಟ್ ಆಧಾರದ ಮೇಲೆ ಮೂರು ಸಾವಿರ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅವರು ಮಾತ್ರ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಸಕಲ ಸಿದ್ಧತೆ: ಮಹಿಳಾ ಮಿಲಿಟರಿ ಪೊಲೀಸರ ಆಯ್ಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದೈಹಿಕ ಪರೀಕ್ಷೆ, ಓಟ, ಉದ್ದ ಜಿಗಿತ ಮತ್ತು ಎತ್ತರ ಜಿಗಿತಕ್ಕೆ ಮೈದಾನವನ್ನು ಸಜ್ಜುಗೊಳಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಮಿಲಿಟರಿ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ದಿಪೇಂದ್ರ ರಾವತ್ ತಿಳಿಸಿದರು.
ಈಗಾಗಲೇ ನೋಂದಣಿ ಮಾಡಿಸಿರುವ ಅಭ್ಯರ್ಥಿಗಳು 7 ಗಂಟೆಗೆ ವರದಿ ಮಾಡಿಕೊಳ್ಳಬೇಕು. ಪರ ಊರುಗಳಿಂದ ಬರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ರೈಲು ನಿಲ್ದಾಣದಲ್ಲಿ ಮಾಹಿತಿ, ಸ್ವಾಗತ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಡಳಿತ ಸಂಪೂರ್ಣ ಸಹಕಾರ: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಮಹಿಳಾ ಮಿಲಿಟರಿ ಪೊಲೀಸ್ ಭರ್ತಿ ರ್ಯಾಲಿಯನ್ನು ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸಂಪೂರ್ಣ ಸಹಕಾರ ನೀಡಿದ್ದು, ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಸಲು ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಆಯ್ಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ. ಅಭ್ಯರ್ಥಿಗಳು ಯಾವುದೇ ಮೂರನೇ ವ್ಯಕ್ತಿಗಳ ಮಾಹಿತಿಗೆ ಕಿವಿಗೊಡಬಾರದು. ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಪಾವತಿ ಆಧಾರದ ಮೇಲೆ ಊಟೋಪಾಹಾರ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಕುಡಿಯುವ ನೀರು ಮತ್ತು ಶೌಚಾಲಯ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ದಿಪೇಂದ್ರ ರಾವ್ ತಿಳಿಸಿದರು.
ಈ ವೇಳೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕ ಈಶ್ವರ್ ಕುಡೊಳ್ಳಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.







