ವಿಂಡೀಸ್ ಪ್ರವಾಸ: ಚೊಚ್ಚಲ ಟೆಸ್ಟ್ ಶತಕದ ನಿರೀಕ್ಷೆಯಲ್ಲಿ ಮಾಯಾಂಕ್

ಹೊಸದಿಲ್ಲಿ, ಜು.31: ಆಸ್ಟ್ರೇಲಿಯ ವಿರುದ್ಧ 2018ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ದಿಢೀರನೆ ಟೀಮ್ ಇಂಡಿಯಾಕ್ಕೆ ಬುಲಾವ್ ಪಡೆದ ಮಾಯಾಂಕ್ ಅಗರ್ವಾಲ್ ಅವರ ಟೆಸ್ಟ್ ಆಡಬೇಕೆಂಬ ಬಹುದಿನದ ಆಸೆ ಕೈಗೂಡಿತ್ತು. ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ಮುರಳಿ ವಿಜಯ್ ಆಸೀಸ್ ವಿರುದ್ಧ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕಳಪೆ ಫಾರ್ಮ್‌ನಿಂದಾಗಿ ಮೆಲ್ಬೋರ್ನ್ ಟೆಸ್ಟ್ ಪಂದ್ಯದಿಂದ ಕೈಬಿಡಲ್ಪಟ್ಟ ಹಿನ್ನೆಲೆಯಲ್ಲಿ ಮಾಯಾಂಕ್ ಅವಕಾಶ ಪಡೆದಿದ್ದರು. ಅಗರ್ವಾಲ್ 50 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 50ಕ್ಕೂ ಅಧಿಕ ಸರಾಸರಿಯಲ್ಲಿ ಒಟ್ಟು 3,954 ರನ್ ಗಳಿಸಿದ್ದರು. ತನ್ನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದ 28ರ ಹರೆಯದ ಮಾಯಾಂಕ್ ಭಾರತದ ಆರಂಭಿಕ ಆಟಗಾರನ ಕೊರತೆ ನೀಗಿಸಿದ್ದರು. ಎಂಸಿಜಿ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 76 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 42 ರನ್ ಗಳಿಸಿದ್ದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಟೆಸ್ಟ್‌ನಲ್ಲಿ 112 ಎಸೆತಗಳಲ್ಲಿ 77 ರನ್ ಗಳಿಸಿದ್ದರು.
ಆಸ್ಟ್ರೇಲಿಯ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕನ್ನಡಿಗ ಮಾಯಾಂಕ್ ನಿರೀಕ್ಷೆಯಂತೆಯೇ ಮುಂಬರುವ ವೆಸ್ಟ್‌ಇಂಡೀಸ್ ಕ್ರಿಕೆಟ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಕೆರಿಬಿಯನ್ ನಾಡಿನಲ್ಲಿ ಭಾರತ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
‘‘ನನಗೆ ಸರಣಿಗೆ ಸಜ್ಜಾಗಲು ಸಾಕಷ್ಟು ಸಮಯ ಲಭಿಸಿದೆ. ಇದು ನನಗೆ ಲಭಿಸಿದ ದೊಡ್ಡ ಅವಕಾಶ. ನಾನು ಈ ತನಕ ವೆಸ್ಟ್‌ಇಂಡೀಸ್‌ನಲ್ಲಿ ಆಡಿಲ್ಲ. ಅಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಎದುರು ನೋಡುತ್ತಿದ್ದೇನೆ. ನನಗೆ ಆಡುವ ಅವಕಾಶ ಲಭಿಸಿದರೆ ಶ್ರೇಷ್ಠ ಪ್ರದರ್ಶನ ನೀಡಲು ಯತ್ನಿಸುವೆ. ಆಸ್ಟ್ರೇಲಿಯದಲ್ಲಿ ಕಲಿತಿರುವುದನ್ನು ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬಳಸಿಕೊಳ್ಳುತ್ತೇನೆ’’ ಎಂದು ಅಗರ್ವಾಲ್ ವಿಶ್ವಾಸ ವ್ಯಕ್ತಪಡಿಸಿದರು.
‘‘ನಾನು ಆಸ್ಟ್ರೇಲಿಯ ಪ್ರವಾಸದಲ್ಲಿ ಸಾಕಷ್ಟು ಕಲಿತಿದ್ದೇನೆ. ಅದು ನನಗೆ ದೊಡ್ಡ ಅವಕಾಶವಾಗಿತ್ತು. ಉತ್ತಮ ಪ್ರದರ್ಶನ ನೀಡಲು ಬಯಸಿದ್ದೆ. ಅಲ್ಲಿ ರನ್ ಗಳಿಸಿದ್ದಕ್ಕೆ ಖುಷಿಯಾಗಿದೆ’’ ಎಂದರು. ಮಾಯಾಂಕ್ ಟೆಸ್ಟ್ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಲು ಸಮರ್ಥವಾಗಿದ್ದರೆ ಕ್ರಿಕೆಟಿಗರ ಎಲೈಟ್ ಕ್ಲಬ್‌ಗೆ ಸೇರಬಹುದಿತ್ತು. ಆದರೆ, ಅವರು ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್ ನಲ್ಲಿ 76 ರನ್ ಗಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಗರ್ವಾಲ್ ತ್ರಿಶತಕ ಸಿಡಿಸಿ ಮಿಂಚಿದ್ದರು. 2017ರಲ್ಲಿ ಮಹಾರಾಷ್ಟ್ರ ವಿರುದ್ಧ ಔಟಾಗದೆ 304 ರನ್ ಗಳಿಸಿ ಈ ಸಾಧನೆ ಮಾಡಿದ್ದರು. ಇದೀಗ ಕೆರಿಬಿಯನ್ ಪ್ರವಾಸದಲ್ಲಿ ಚೊಚ್ಚಲ ಶತಕ ಗಳಿಸುವ ವಿಶ್ವಾಸದಲ್ಲಿದ್ದಾರೆ.
‘‘ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ನಾನು 70ಕ್ಕೂ ಅಧಿಕ ರನ್ ಗಳಿಸಿದ್ದೆ. ವೆಸ್ಟ್‌ಇಂಡೀಸ್‌ನಲ್ಲಿ 100 ರನ್ ಗಳಿಸಲು ಬಯಸಿದ್ದೇನೆ’’ ಎಂದು ಮಾಯಾಂಕ್ ಹೇಳಿದ್ದಾರೆ.







