ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಹೆಚ್ಚಳ: ಸರಕಾರಿ ಭರವಸೆಗಳ ಸಮಿತಿ ಶಿಫಾರಸ್ಸು
ಬೆಂಗಳೂರು, ಜು.31: ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನವನ್ನು ಹೆಚ್ಚಿಸುವಂತೆ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆಯ ಸರಕಾರಿ ಭರವಸೆಗಳ ಸಮಿತಿಯ ಐದನೇ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
ಬುಧವಾರ ವಿಧಾನಸಭೆಯಲ್ಲಿ ಸರಕಾರಿ ಭರವಸೆಗಳ ಸಮಿತಿಯ ಸದಸ್ಯ ಲಕ್ಷ್ಮಣ ಸವದಿ ಮಂಡಿಸಿದ ವರದಿಯಲ್ಲಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಹೆಚ್ಚಿಸುವುದರ ಜೊತೆಗೆ, ಕ್ರೀಡೆಯ ಮುಂಚೂಣಿಯಲ್ಲಿರುವ ಕುಟುಂಬದವರ ಮಕ್ಕಳಿಗೆ 5ನೇ ತರಗತಿಯಿಂದಲೇ ಉತ್ತಮ ಕ್ರೀಡಾ ತರಬೇತಿ ನೀಡುವಂತೆಯೂ ಶಿಫಾರಸ್ಸು ಮಾಡಲಾಗಿದೆ.
ಯುವ ಕ್ರೀಡಾ ಪಟುಗಳನ್ನು ಗುರುತಿಸುವ ಹಾಗೂ ಪ್ರೋತ್ಸಾಹಿಸುವುದಕ್ಕಾಗಿ ಕ್ರೀಡಾಂಗಣವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಭಿವೃದ್ಧಿಪಡಿಸಬೇಕು. ಮತ್ತು ಕ್ರೀಡಾ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಆದ್ಯತೆ ನೀಡಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸರಕಾರ ಮತ್ತು ಜನತೆಯ ನಡುವೆ ಸರಕಾರದ ನೀತಿ ಮತ್ತು ಯೋಜನೆಗಳನ್ನು ತಲುಪಿಸುವ ಕೊಂಡಿಯಾಗಿದ್ದು, ಸಿಬ್ಬಂದಿ ವರ್ಗದ ಕೊರತೆಯಿರುವುದರಿಂದ ಸರಕಾರದ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಆದುದರಿಂದ, ಸಿಬ್ಬಂದಿ ವರ್ಗದ ಕೊರತೆಯನ್ನು ನಿವಾರಣೆಗೊಳಿಸುವುದರೊಂದಿಗೆ ಸರಕಾರದ ನೀತಿ ನಿರೂಪಣೆಗಳು ಮತ್ತು ಸಾರ್ವಜನಿಕ ಮಹತ್ತರವಾದ ಯೋಜನೆಗಳನ್ನು ಜನತೆಗೆ ಸಕಾಲದಲ್ಲಿ ತಲುಪಿಸಲು ಸೂಕ್ತ ಏರ್ಪಾಡು ಮಾಡಬೇಕೆಂದು ಸರಕಾರಿ ಭರವಸೆಗಳ ಸಮಿತಿಯು ಶಿಫಾರಸ್ಸು ಮಾಡಿದೆ.