ಕೊಹ್ಲಿಗೆ ಬೇಕೆನಿಸಿದ ಕೋಚ್ ಆಯ್ಕೆಗೆ ಅವಕಾಶ ಇದೆ: ಸೌರವ್ ಗಂಗುಲಿ

ಕೋಲ್ಕತಾ, ಜು.31: ಟೀಮ್ ಇಂಡಿಯಾದ ಕೋಚ್ ಆಯ್ಕೆಯ ಪ್ರಕ್ರಿಯೆಯಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾಯಕ ವಿರಾಟ್ ಕೊಹ್ಲಿಗೆ ಅವಕಾಶ ಇದೆ ಎಂದು ಮಾಜಿ ನಾಯಕ ಸೌರವ್ ಗಂಗುಲಿ ಹೇಳಿದ್ದಾರೆ. ಭಾರತ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ ಬಳಿಕ ಮೊದಲ ಬಾರಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಕೋಚ್ ರವಿ ಶಾಸ್ತ್ರಿ ತಮ್ಮ ಹುದ್ದೆಯಲ್ಲಿ ಮುಂದುವರಿಯುವುದನ್ನು ಬೆಂಬಲಿಸಿ ಮಾತನಾಡಿದ್ದರು.
ಕೋಚ್ ರವಿ ಶಾಸ್ತ್ರಿ ಅವರ ಅಧಿಕಾರದ ಅವಧಿ ಭಾರತ ತಂಡದ ವೆಸ್ಟ್ ಇಂಡೀಸ್ ವಿರುದ್ಧ ಪ್ರವಾಸ ಸರಣಿ ಮುಗಿದ ಬೆನ್ನಲ್ಲೇ ಕೊನೆಗೊಳ್ಳಲಿದೆ. ವೆಸ್ಟ್ ಇಂಡೀಸ್ ಪ್ರವಾಸ ಸರಣಿ ಆಗಸ್ಟ್ 3ರಂದು ಆರಂಭಗೊಳ್ಳಲಿದೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುವ ಮುನ್ನ ಕೊಹ್ಲಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಂಗುಲಿ‘‘ ಟೀಮ್ ಇಂಡಿಯಾಕ್ಕೆ ಕೋಚ್ ಆಗಿ ಯಾರು ಬೇಕು ಎಂದು ಹೇಳುವ ಹಕ್ಕು ಕೊಹ್ಲಿಗಿದೆ’ ಎಂದು ಹೇಳಿದ್ದಾರೆ. 2017ರಲ್ಲಿ ರವಿ ಶಾಸ್ತ್ರಿ ಅವರನ್ನು ಆಯ್ಕೆ ಮಾಡಿದ್ದ ಮೂರು ಮಂದಿ ಸದಸ್ಯರ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಯಲ್ಲಿ ಸೌರವ್ ಗಂಗುಲಿ ಇದ್ದರು. ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಈ ಸಮಿತಿಯಲ್ಲಿದ್ದ ಸದಸ್ಯರು.
ಈ ಬಾರಿ ಕೋಚ್ ಆಯ್ಕೆಯನ್ನು ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ನೇತೃತ್ವದ ಸಮಿತಿ ನಡೆಸಲಿದೆ.
ಕಪಿಲ್ ದೇವ್ ನೇತೃತ್ವದ ಸಮಿತಿಯು ಕಳೆದ ಡಿಸೆಂಬರ್‌ನಲ್ಲಿ ಮಹಿಳಾ ತಂಡಕ್ಕೆ ಕೋಚ್ ಆಗಿ ಡಬ್ಲು ವಿ ರಾಮನ್‌ರನ್ನು ಆಯ್ಕೆ ಮಾಡಿತ್ತು. ಇದೇ ವೇಳೆ ಯುವ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಡೋಪಿಂಗ್ ಟೆಸ್ಟ್ ನಲ್ಲಿ ಅನುತ್ತೀರ್ಣಗೊಂಡು 8 ತಿಂಗಳು ನಿಷೇಧಕ್ಕೊಳಗಾದ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಂಗುಲಿ ‘‘ಕೆಮ್ಮಿನ ಔಷಧಿಯಲ್ಲಿ ಸಾಮಾನ್ಯವಾಗಿ ನಿಷೇಧಿತ ಅಂಶಗಳು ಇರುತ್ತವೆ. ಆದರೆ ಪೃಥ್ವಿ ಶಾ ವಿಚಾರ ಏನಾಗಿದೋ ನನಗೆ ಗೊತ್ತಿಲ್ಲ’’ ಎಂದು ಗಂಗುಲಿ ತಿಳಿಸಿದ್ದಾರೆ.







