ಆ. 6: ಅರ್ಹ ಮುಸ್ಲಿಂ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ

ಮಂಗಳೂರು, ಆ.1: ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ದ.ಕ. ಮತ್ತು ಉಡುಪಿ ಜಿಲ್ಲೆಯ 70 ಮಂದಿ ಅರ್ಹ ಮುಸ್ಲಿಂ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವು ಆ.6ರಂದು ನಗರದ ಮಿನಿ ಪುರಭವನದಲ್ಲಿ ಜರುಗಲಿದೆ ಎಂದು ಕಮಿಟಿಯ ಅಧ್ಯಕ್ಷ ಅಲ್ಹಾಜ್ ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ದುಆದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮವನ್ನು ಮಾಜಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವಾ, ಶಾಸಕರಾದ ವೇದವ್ಯಾಸ ಕಾಮತ್, ಬಿ.ಎಂ.ಫಾರೂಕ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಯೆನೆಪೊಯ ವಿವಿಯ ಕುಲಾಧಿಪತಿ ಹಾಜಿ ಯೆನೆಪೊಯ ಅಬ್ದುಲ್ಲ ಕುಂಞಿ, ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಜಿಲ್ಲಾ ಎಸ್ಪಿ ಬಿಎಂ ಲಕ್ಷ್ಮಿಪ್ರಸಾದ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸೆಂಟ್ರಲ್ ಕಮಿಟಿಯ ಪದಾಧಿಕಾರಿಗಳಾದ ಇಬ್ರಾಹೀಂ ಕೋಡಿಜಾಲ್, ಕೆ.ಅಶ್ರಫ್, ಹನೀಫ್ ಹಾಜಿ, ಅಬೂಬಕರ್ ಕುದ್ರೋಳಿ, ಅಹ್ಮದ್ ಬಾವಾ ಪಡೀಲ್, ಡಿ.ಎಂ.ಅಸ್ಲಂ, ಮುಹಮ್ಮದ್ ಬಪ್ಪಳಿಗೆ, ಸಿ.ಎಂ. ಹನೀಫ್ ಮತ್ತಿತರರು ಉಪಸ್ಥಿತರಿದ್ದರು.





