ಪುತ್ತೂರು: ಮಾಜಿ ರಾಷ್ಟ್ರಪತಿ ದಿ. ಡಾ. ಅಬ್ದುಲ್ ಕಲಾಂ ಸಂಸ್ಮರಣೆ

ಪುತ್ತೂರು: ದೇಶದ ಮಾಜಿ ರಾಷ್ಟ್ರಪತಿಯಾದ ಶ್ರೇಷ್ಠ ವಿಜ್ಞಾನಿ ಡಾ. ಅಬ್ದುಲ್ ಕಲಾಂ ಅವರ ಸಂಸ್ಮರಣಾ ಕಾರ್ಯಕ್ರಮ ಗುರುವಾರ ಪುತ್ತೂರು ತಾಲೂಕಿನ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯಲ್ಲಿ ನಡೆಯಿತು.
ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್ ಅವರು ಡಾ. ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಡಾ. ಕಲಾಂ ಜೀವನದ ಹಾದಿ ಎಲ್ಲರಿಗೂ ಪ್ರೇರಣಾದಾಯಕವಾಗಿದೆ. ಅವರಂತೆ ಎಲ್ಲರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ದೇಶದ ಪ್ರಗತಿಗೆ ಕಾರಣರಾಗಬೇಕು ಎಂದರು.
ಡಾ. ಕಲಾಂ ಸಂಸ್ಮರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಸಂಪನ್ಮೂಲ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಆರೋಗ್ಯ ಮತ್ತು ನೈರ್ಮಲ್ಯ, ಗಣಿತ ಶಾಸ್ತ್ರದ ವಿನ್ಯಾಸಗಳು, ಸಾರಿಗೆ ಸಂಪರ್ಕ ಸಂವಹನ, ವ್ಯವಸಾಯ ಮತ್ತು ಸಾವಯವ ಕೃಷಿ ಎಂಬ ವಿಷಯಗಳ ಬಗ್ಗೆ ವಿಜ್ಞಾನ ಮಾದರಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಒಟ್ಟು 95 ವಿದ್ಯಾರ್ಥಿಗಳು ವಿಜ್ಞಾನ ಮಾದರಿಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕರಾದ ಶ್ಯಾಮಲಾ, ನಿವೇದಿತಾ, ನಿರ್ಮಲಾ, ದೀಪ್ತಿ, ಪೂಜಾ ಮತ್ತು ಸುಚಿತಾ ತೀರ್ಪುಗಾರರಾಗಿ ಸಹಕರಿಸಿದರು.
ವಿಜ್ಞಾನ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಸುಮಿತ್ ಬನಾರಿ ಅವರು ಡಾ. ಕಲಾಂ ಅವರ ಜೀವನ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.
`ಅವನಿ' ವಿಜ್ಞಾನ ಸಂಘದ ಸಂಯೋಜಕಿ ಪ್ರತಿಮಾ ಎನ್.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜ್ಞಾನ ವಿದ್ಯಾರ್ಥಿ ಸಮಘದ ಪ್ರತಿನಿಧಿ ಸ್ತುತಿ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ರೇಖಾಮಣಿ ಮತ್ತು ಶಾರದಾ ಕಾರ್ಯಕ್ರಮ ಸಂಯೋಜಿಸಿದ್ದರು.







