ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಸಾವು ಪ್ರಕರಣ: ನಾಲ್ಕು ದಿನದಲ್ಲಿ ತನಿಖೆ ಪೂರ್ಣ- ಕಮಿಷನರ್

ಸಿದ್ಧಾರ್ಥ
ಮಂಗಳೂರು, ಆ.1: ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ ಅವರ ಸಾವು ಪ್ರಕರಣದ ತನಿಖೆ ಕೈಗೊಳ್ಳಲಾಗಿದ್ದು, ತನಿಖೆಯನ್ನು ನಾಲ್ಕು ದಿನಗಳಲ್ಲಿ ಪೂರ್ಣಗೊಳಿಸುವಂತೆ ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಮಂಗಳೂರು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಬೆಂಗಳೂರಲ್ಲಿ ಸಿದ್ಧಾರ್ಥ ಕುಟುಂಬ ಹಾಗೂ ಉದ್ಯಮದ ಬಗ್ಗೆ ತನಿಖೆ ನಡೆಯುತ್ತಿದೆ. ಮತ್ತೊಂದು ತಂಡವು ತಾಂತ್ರಿಕ ಆಯಾಮದಿಂದ ತನಿಖೆ ನಡೆಸುತ್ತಿದೆ ಎಂದರು.
ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ತನಿಖೆ
ಮಂಗಳೂರು ಸಿಸಿಬಿ ಪೊಲೀಸ್ ತಂಡವು ಬೆಂಗಳೂರಿಗೆ ತೆರಳಿ ತನಿಖೆ ನಡೆಸಿದೆ. ಈಗಾಗಲೇ ಸಿದ್ಧಾರ್ಥ ಕುಟುಂಬ ಹಾಗೂ ಆಪ್ತರನ್ನು ಭೇಟಿ ಮಾಡಿ ತನಿಖೆ ನಡೆಸಲಾಗಿದೆ. ಮತ್ತೆ ತನಿಖೆ ಮುಂದುವರಿಯಲಿದೆ. ಮಂಗಳೂರಿನಲ್ಲಿ ದಕ್ಷಿಣ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ಸಿದ್ಧಾರ್ಥ ಅವರ ಕಾರು ಚಾಲಕನನ್ನು ವಿಚಾರಣೆ ನಡೆಸಲಾಗಿದೆ. ಅವರಿಂದ ಕೆಲವೊಂದು ಮಾಹಿತಿಯನ್ನು ಪಡೆದು ಕಳುಹಿಸಿಕೊಡಲಾಗಿದೆ. ಇದಲ್ಲದೆ, ಬ್ರಹ್ಮರಕೂಟ್ಲು ಟೋಲ್ಗೇಟ್ನಿಂದ ಪಂಪ್ವೆಲ್ಗೆ ಬಂದ ಬಳಿಕ ಎಲ್ಲಿಗೆ ಹೋಗಿದ್ದರು ಹಾಗೂ ನೇತ್ರಾವತಿ ಸೇತುವೆಯಿಂದ ನಾಪತ್ತೆಯಾದ ಅಲ್ಲಿವರೆಗಿನ ಎಲ್ಲ ಮಾಹಿತಿಯನ್ನು ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.
ತನಿಖಾ ನೋಟಿಸ್ ನೀಡಿಲ್ಲ
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ಮುನ್ನ ಸಿದ್ಧಾರ್ಥ ಬರೆದಿದ್ದಾರೆನ್ನುವ ಪತ್ರದಲ್ಲಿ ಐಟಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದರು. ಈಗ ಪತ್ರವನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಪತ್ರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಮೂಲಕ ಪತ್ರದಲ್ಲಿ ಆರೋಪಿಸಿರುವ ಅಂಶದ ಬಗ್ಗೆ ತನಿಖೆ ಕೈಗೊಳ್ಳಲಾಗುವುದು. ಇದುವರೆಗೆ ಐಟಿ ಅಧಿಕಾರಿಗಳಿಗೆ ಯಾವುದೇ ತನಿಖಾ ನೋಟಿಸ್ ನೀಡಿಲ್ಲ ಎಂದು ಕಮಿಷನರ್ ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದರು.
ಉದ್ಯಮಿ ಸಿದ್ಧಾರ್ಥ ಅವರ ಹಣಕಾಸು ಸಲಹೆಗಾರರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಕೆಲವು ಪ್ರಮುಖ ಸಲಹೆಗಾರರು ವಿದೇಶದಲ್ಲಿದ್ದು, ಅವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುವುದು. ಅವರು ಸ್ವದೇಶಕ್ಕೆ ಬಂದ ಬಳಿಕ ಪೂರ್ಣ ಮಾಹಿತಿಯನ್ನು ಪಡೆಯಲಾಗುವುದು. ಎರಡ್ಮೂರು ಮಂದಿ ಹಣಕಾಸು ಸಲಹೆಗಾರರಿಗೆ ತನಿಖೆಗೆ ಸಹಕರಿಸುವಂತೆ ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮಹತ್ವ ಪಡೆದ ಪೋಸ್ಟ್ ಮಾರ್ಟಂ ವರದಿ ?
ಉದ್ಯಮಿ ಸಿದ್ಧಾರ್ಥ ದೇಹದ ಮರಣೋತ್ತರ ಪರೀಕ್ಷೆಯನ್ನು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಬುಧವಾರ ನಡೆಸಲಾಗಿದೆ. ಫೊರೇನ್ಸಿಕ್ ತಜ್ಞರಿಬ್ಬರು ಪೋಸ್ಟ್ ಮಾರ್ಟಂ ನಡೆಸಿದ್ದಾರೆ. ಇದರ ವರದಿಯನ್ನು 30 ದಿನಗಳೊಳಗೆ ಆಸ್ಪತ್ರೆಯ ಅಧೀಕ್ಷಕರಿಗೆ ಸಲ್ಲಿಸಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಈಗ ಪೊಲೀಸ್ ಮೂಲಗಳ ಪ್ರಕಾರ, ಪೋಸ್ಟ್ ಮಾರ್ಟಂ ವರದಿ ಆ. 2ರಂದು ಸಲ್ಲಿಕೆಯಾಗುವ ಸಾಧ್ಯತೆ ಇದೆ. ಐಟ ಅಧಿಕಾರಿಗಳ ವಿರುದ್ಧ ಸಿದ್ಧಾರ್ಥ ಆರೋಪ ಮಾಡಿರುವುದರಿಂದ ಸಿದ್ಧಾರ್ಥ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮುಂದಿನ ತನಿಖಾ ದೃಷ್ಟಿಯಿಂದ ಈ ವರದಿ ಮಹತ್ವ ಪಡೆದುಕೊಂಡಿದೆ. ಸಿದ್ಧಾರ್ಥ ಹೇಗೆ ಮೃತಪಟ್ಟರು ? ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಈ ವರದಿ ಬಂದ ಬಳಿಕ ಬೆಳಕಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







