ಆಟಿಯ ಹಾಲೆ ಕಷಾಯ; ಆರೋಗ್ಯ ರಕ್ಷಣೆಗೆ ಪಾರಂಪರಿಕ ಚೌಕಟ್ಟು - ಡಾ.ಮುರಳೀಧರ ಬಲ್ಲಾಳ್

ಉಡುಪಿ, ಆ.1: ತುಳುನಾಡಿನಲ್ಲಿ ಆಟಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಹಾಲೆ ಮರದ ತೊಗಟೆಯಿಂದ ಮಾಡಿದ ಕಹಿಯಾದ ಕಷಾಯ ಸೇವೆಯಿಂದ ಮುಂಬರುವ ದಿನಗಳಲ್ಲಿ ಆಚರಿಸಲಾಗುವ ವಿವಿಧ ಹಬ್ಬಗಳಲ್ಲಿ ಸೇವಿಸುವ ವಿವಿಧ ಭಕ್ಷಭೋಜ್ಯಗಳ ಸೇವನೆಯಿಂದ ಉದರವನ್ನು ಸಜ್ಜುಗೊಳಿಸುವುದಾಗಿದೆ. ಆರೋಗ್ಯ ರಕ್ಷಣೆಗಾಗಿ ಹಿಂದಿನವರು ಈ ರೀತಿಯಲ್ಲಿ ಪಾರಂಪರಿಕ ಶಾಸ್ತ್ರೀಯ ಚೌಕಟ್ಟು ವಿಧಿಸಿದ್ದಾರೆ ಎಂದು ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜು ಫಾರ್ಮಸಿ ವಿಭಾಗದ ಮುಖ್ಯಸ್ಥ ಡಾ. ಮುರಳೀಧರ ಬಲ್ಲಾಳ್ ಹೇಳಿದ್ದಾರೆ.
ಗುರುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್ ಹಾಗೂ ಎಸ್.ಡಿ.ಎಂಆಯುರ್ವೇದ ಕಾಲೇಜು ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟಿ ಅಮವಾಸ್ಯೆ ಕಷಾಯ ಸೇವನೆ ಮಹತ್ವವನ್ನು ವಿವರಿಸುತ್ತಾ ಅವರು ಈ ವಿಷಯ ತಿಳಿಸಿದರು.
ಹಾಲೆ ಕಷಾಯದ ತಿಕ್ತರಸ, ಜಡತ್ವ ನಿವಾರಿಸಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಹಿಂದಿನವರು ಆಟಿ ತಿಂಗಳು ಪೂರ್ತಿ ವಿವಿಧ ಕಷಾಯ ಸೇವಿಸಿ, ಕೊನೆಯ ದಿನ ಹಾಲೆ ಮರದ ಕಷಾಯ ಕುಡಿಯುತ್ತಿದ್ದರು. ಇಂದಿನ ಯುವಜನತೆ ಆಟಿ ಕಷಾಯ ಮಹತ್ವ ಅರಿತುಕೊಳ್ಳಬೇಕು ಎಂದು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಸ್ವಷ್ನಾ ಡಿ.ಭಂಡಾರಿ, ಹಿಂದಿನ ಕೃಷಿ ಪ್ರಧಾನ ಸಮಾಜದಲ್ಲಿ ಆಟಿ ತಿಂಗಳು ಎಡೆಬಿಡದ ಮಳೆ ಕಾರಣದಿಂದ ಯಾವುದೇ ರೋಗ ರುಜಿನಗಳು ಬಾಧಿಸದಂತೆ ಪೂರ್ವಜರು ಅನೇಕ ಆಚರಣೆಗಳನ್ನು ಅನುಸರಿಸುತಿದ್ದರು. ಇದರಿಂದ ಅವರಿಗಿದ್ದ ಆರೋಗ್ಯ ಕಾಳಜಿ ಸ್ಪಷ್ಟವಾುತ್ತದೆ ಎಂದರು.
ಆಟಿ ತಿಂಗಳಿನಲ್ಲಿ ಹಾಲೆ ಕಷಾಯವಲ್ಲದೆ 16 ಬಗೆಯ ವಿವಿಧ ಕಷಾಯ ಕುಡಿಯುತ್ತಿದ್ದರು. ಅಮಾವಾಸ್ಯೆ ದಿನ ಹಾಲೆ ಮರದ ತೊಗಟೆಯಲ್ಲಿ ಔಷಧೀಯ ಗುಣ ಹೆಚ್ಚಾಗಿರುತ್ತದೆ ಎಂಬುದು ವೆಜ್ಞಾನಿಕವಾಗಿ ಸಾಬೀತಾಗಿದೆ ಎಂದರು.
ಹಾಲೆ ಮರದ ರೀತಿಯಲ್ಲೇ ಕಾಸರಕ ಎಂಬ ವಿಷಕಾರಿ ಮರವೂ ಇರುತ್ತದೆ. ಈ ಬಗ್ಗೆ ಜನರು ಎಚ್ಚರವಹಿಸಬೇಕು. ಇಂಥ ಅಪಾಯವನ್ನು ಅರಿತಿದ್ದ ಹಿಂದಿನವರು ಆಟಿ ಅಮಾವಾಸ್ಯೆ ಮುಂಚಿನ ದಿನ ಹಾಲೆ ಮರಕ್ಕೆ ಬಿಳಿ ವಸ್ತ್ರವನ್ನು ಕಟ್ಟಿ ಬರುವ ಸಂಪ್ರದಾಯ ಪಾಲಿಸುತ್ತಿದ್ದರು. ಆಚರಣೆಗಳಿಗೆ ಮರುಜೀವ ನೀಡುವ ಅಗತ್ಯವಿದ್ದು, ಯುವಪೀಳಿಗೆಗೆ ಸಂಸ್ಕೃತಿಯನ್ನು ಪರಿಚಯಿಸಬೇಕು. ಸಪ್ತವರ್ಣ (ಹಾಲೆ ಮರ) ಮರಗಳನ್ನು ಬೆಳೆಸಿ, ಉಳಿಸಿಕೊಳ್ಳಬೇಕು ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್ ಉಪಸ್ಥಿತರಿದ್ದರು. ಎಸ್‌ಡಿಎಂ ಫಾರ್ಮಸಿಯಲ್ಲಿ ತಯಾರಿಸಿದ ಆಟಿ ಕಷಾಯವನ್ನು ವಿತರಿಸಲಾಯಿತು.
ಉದ್ಯಾವರ ಎಸ್‌ಡಿಎಂ ಆಯುರ್ವೇದ ಕಾಲೇಜು ಫಾರ್ಮಸಿ ವಿಭಾಗದ ಮುಖ್ಯಸ್ಥ ಡಾ. ಮುರಳೀಧರ ಬಲ್ಲಾಳ್ ಮಾತನಾಡಿದರು.







