ಫಿಶ್‌ಮಿಲ್‌ಗೆ ಜಿಎಸ್‌ಟಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡನೆ
ಉಡುಪಿ, ಆ.1: ಜಿಎಸ್‌ಟಿ ಆರಂಭಗೊಂಡ 2017 ಜುಲೈನಿಂದ ಜಾರಿಗೆ ಬರುವಂತೆ ಶೇ.5ರ ದರದಲ್ಲಿ ಮೀನಿನ ಹುಡಿ (ಫಿಶ್‌ಮಿಲ್) ಉತ್ಪನ್ನದ ಮೇಲೆ ಕೇಂದ್ರ ಸರಕಾರ ಜಿಎಸ್‌ಟಿ ವಿಧಿಸಿರುವುದನ್ನು ವಿರೋಧಿಸಿ ಅಖಿಲ ಭಾರತ ಮೀನಿನ ಹುಡಿ ಮತ್ತು ಮೀನಿನ ಎಣ್ಣೆ ತಯಾರಕರು ಮತ್ತು ವ್ಯಾಪಾರಿಗಳ ಸಂಘ ತಮ್ಮ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟ ಮುಷ್ಕರ ನಡೆಸಲು ನಿರ್ಧರಿಸಿದೆ.
2018ರ ಡಿಸೆಂಬರ್ ಕೊನೆಗೆ ಶೇ.5 ಜಿಎಸ್‌ಟಿ ಆದೇಶ ಕೇಂದ್ರ ಸರಕಾರದಿಂದ ಬಂದಾಗ ಫಿಶ್‌ಮಿಲ್ ಉತ್ಪಾದಕರು ತಾವು ಗ್ರಾಹಕರಿಂದ ಈ ಬಗ್ಗೆ ಯಾವುದೇ ತೆರಿಗೆ ಹಣ ಪಡೆಯದೇ ಇರುವುದರಿಂದ ಪಾವತಿ ಮಾಡಲು ಬರುವುದಿಲ್ಲ ಎಂದು ಪ್ರಧಾನ ಮಂತಿ, ಹಣಕಾಸು ಸಚಿವರು ಹಾಗೂ ಸಂಸದರಿಗೆ ಮನವರಿಕೆ ಮಾಡಿ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಮನವಿಯನ್ನು ನೀಡಿದ್ದರೂ, ಇದೀಗ ಇಲಾಖೆಯಿಂದ ಜಿಎಸ್‌ಟಿ ನೀಡದ ಫಿಶ್‌ಮಿಲ್ ಮಾಲಕರ ಮೇಲೆ ವಂಚನೆ ಪ್ರಕರಣ ದಾಖಲಿಸುವಂತೆ ಬೆದರಿಕೆ ಹಾಗೂ ಕೆಲವರ ಬ್ಯಾಂಕ್ ಖಾತೆಗಳ ಸ್ಥಂಭನಗೊಳಿಸಿದ ಕ್ರಮವನ್ನು ಕೇಂದ್ರದ ನರೇಂದ್ರ ಮೋದಿ ಸರಕಾರದ ಸವಾರ್ಧಿಕಾರಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಧೋರಣೆಯೆಂದು ಉಡುಪಿಯ ಬ್ಲಾಕ್ ಕಾಂಗ್ರೆಸ್ ಸಮಿತಿ ಖಂಡಿಸಿದೆ.
ಮೀನಿನ ಎಣ್ಣೆಯ ಉತ್ಪಾದಕರು ಶೇ.5 ಇದ್ದ ತೆರಿಗೆ ಜಿಎಸ್‌ಟಿ ಬಂದಾಗ ಶೇ.12ಕ್ಕೆ ಏರಿಕೆಯಾದರೂ ಅದನ್ನು ಪ್ರಾಮಾಣಿಕವಾಗಿ ನೀಡುತಿದ್ದಾರೆ. ಮೀನಿನ ಉತ್ಪನ್ನವನ್ನು ಸ್ಥಗಿತಗೊಳಿಸಿರುವುದರಿಂದ ಸಾವಿರಾರು ಉದ್ಯೋಗಿಗಳಿಗೆ ಲಕ್ಷಾಂತರ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಆದುದರಿಂದ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಜಿಎಸ್‌ಟಿ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕೆಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಪ್ರಧಾನ ಕಾರ್ಯದರ್ಶಿ ಕೆ.ಜನಾರ್ದನ ಭಂಡಾರ್‌ಕರ್, ನವೀನ್ ಕೋಟ್ಯಾನ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.







